ಬಣ್ಣದ ವೇಷಗಳು ಕಳಚಿ ಬೀಳುತ್ತವೆ ನಂಬಿಕೆ ಇರಲೆನ್ನುವ ಗೋವಿಂದ ಹೆಗಡೆ ಗಜಲ್

ವಾದಗಳು ಬೆಳೆದಿವೆ ಸಂವಾದವನ್ನೇಕೆ ಕೈಬಿಟ್ಟರು 

ದ್ವೇಷದುರಿ ಹಬ್ಬುತ್ತಿದೆ ಪ್ರೀತಿಯನ್ನೇಕೆ ಕೈಬಿಟ್ಟರು 

ಸಂವಾದಗಳು ನಿಂತ ಕಾರಣದಿಂದಲೇ ವಾದಗಳು ಹೆಚ್ಚುತ್ತಿವೆ. ಪರಸ್ಪರ ಪ್ರೀತಿಸುವುದನ್ನು ನಿಲ್ಲಿಸಿರುವುದರಿಂದಲೇ ದ್ವೇಷದ ಬೆಂಕಿ ಹೊತ್ತಿ ಉರಿಯುತ್ತಿದೆ ಎಂದು ಇಂದಿನ ತಲ್ಲಣ, ಆತಂಕಗಳಿಗೆ ಪರಿಹಾರದ ಸಾಲುಗಳನ್ನು ಹೇಳುವ ಡಾಽ ಗೋವಿಂದ ಹೆಗಡೆ ಅವರು ಮೂಲತಃ ಯಲ್ಲಾಪುರದವರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಪದವಿ ಮತ್ತು ಕರ್ನಾಟಕ ಇನ್ಸಿ-್ಟಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ ಉನ್ನತ ವೈದ್ಯ ಪದವಿ ಗಳಿಸಿದರು. ಸದ್ಯಕ್ಕೆ ಹುಬ್ಬಳ್ಳಿಯಲ್ಲಿ ನೆಲೆಸಿರುವ ಇವರು ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡುತ್ತಿದ್ದಾರೆ. ಕವಿತೆ, ಹನಿಗವಿತೆ, ಶೀಶುಗೀತೆಗಳು, ಭಾವಗೀತೆಗಳು, ಗಜಲ್, ಹಾಯ್ಕು, ಫರ್ದ್‌, ರುಬಾಯಿ, ತನಗ ಮುಂತಾದ ಕಾವ್ಯ ಪ್ರಕಾರಗಳಲ್ಲಿ ಬರವಣಿಗೆ ಮಾಡಿರುವ ಇವರು ಜೊತೆಗೆ ಕಥೆ, ಪ್ರಬಂಧ, ವಿಮರ್ಶೆಗಳನ್ನು ಬರೆಯುತ್ತಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ, ಅಂತರ್‌ಜಾಲ ತಾಣಗಳಲ್ಲಿ, ಸಮೂಹ ತಾಣಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಇವರ ಮೊದಲ ಕವನ ಸಂಕಲನ ‘ಕನಸು ಕೋಳಿಯ ಕತ್ತು’ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದುಕೊಂಡಿದೆ. ‘ಪೇಟೆ ಬೀದಿಯ ತೇರು’ ಪ್ರಕಟಿತ ಎರಡನೇ ಕವನ ಸಂಕಲನ. ಗೋವಿಂದ ಹೆಗಡೆ ಅವರು ಮೈಸೂರು ದಸರಾ ಕವಿಗೋಷ್ಠಿ, ಧಾರವಾಡ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಸೇರಿದಂತೆ ನಾಡಿನ ಪ್ರಮುಖ ವೇದಿಕೆಗಳಲ್ಲಿ ಕವಿತೆ ವಾಚಿಸಿದ್ದಾರೆ. ಆಕಾಶವಾಣಿಯಲ್ಲಿ ಕವಿತೆಗಳು ಪ್ರಸಾರವಾಗಿವೆ. ಸದಾ ಹೊಸತನಕ್ಕೆ ಹಂಬಲಿಸುವ ಇವರ ಬರಹಗಳಲ್ಲಿ ಜೀವಪರವಾದ ಧೋರಣೆ, ಮನುಷ್ಯಪ್ರೀತಿಯ ಕಾಳಜಿಯನ್ನು ನಾವು ಕಾಣಬಹುದು. ಇವರ ರಚನೆಯ ಗಜಲ್‌ನ ಓದು, ಅದರ ಒಳನೋಟ ನಿಮಗಾಗಿ.

                                  ಗಜಲ್ 

ಸುರಂಗಕ್ಕೊಂದು ಕೊನೆಯಿದ್ದೇ ಇದೆ ನಂಬಿಕೆ ಇರಲಿ 

ಕತ್ತಲ ಕೊನೆಯಲ್ಲಿ ಬೆಳಕಿದ್ದೇ ಇದೆ ನಂಬಿಕೆ ಇರಲಿ 

ಹೆಜ್ಜೆ ಹೆಜ್ಜೆಗೆ ಮುಳ್ಳುಗಳ ಬಿತ್ತುತ್ತ ನಡೆದರೇ ಅವರು 

ಇರಿವ ಮೊನೆಗಳಿಗೆ ಸೋಲಿದ್ದೇ ಇದೆ ನಂಬಿಕೆ ಇರಲಿ 

ಎದೆಗಳ ನಡುವೆ ಕಂದಕವನ್ನು ತೋಡುವವರು ಎಷ್ಟು 

ಸೇತುವೆ ಕಟ್ಟುವ ಕೈಗೆ ಗೆಲುವಿದ್ದೇ ಇದೆ ನಂಬಿಕೆ ಇರಲಿ 

ಬಣ್ಣದ ವೇಷಗಳು ಎಷ್ಟೊಂದು ಮೆರೆಯುತ್ತಿವೆ ಇಲ್ಲಿ 

ನಿಜವು ಬಯಲಾಗುವ ಕ್ಷಣವಿದ್ದೇ ಇದೆ ನಂಬಿಕೆ ಇರಲಿ 

ಎದೆಯ ಹಾಡ ನುಡಿಸುವಾಗ ತಪ್ಪುವುದೇಕೆ ತಾಳ 

ಕೊನೆಗೂ ಒಲವಿಗೆ ಜಯವಿದ್ದೇ ಇದೆ ನಂಬಿಕೆ ಇರಲಿ 

                                                               - ಡಾ. ಗೋವಿಂದ ಹೆಗಡೆ 

“ಉರಿವ ಸೂರ್ಯ/ಸತ್ತ ಸುಳಿವಿಲ್ಲ/ಮಲೆವ ವ್ಯೋಮ/ಕಳಚಿ ಬಿದ್ದದ್ದಿಲ್ಲ/ನಗುವ ತಾರೆ/ಅತ್ತ ಕುರುಹಿಲ್ಲ/ನಿನ್ನ ನಂಬುಗೆಗೆ/ನಲುಗೇಕೋ” ಎಂದು ಬರೆಯುತ್ತಾರೆ ಕವಿ ಡಾ. ದೊಡ್ಡರಂಗೇಗೌಡರು. ಈ ಜಗತ್ತು ನಿಂತಿರುವುದು ನಂಬುಕೆಯ ಮೇಲೆಯೇ. ಪ್ರೀತಿ, ಗೆಳೆತನ, ಬಾಂಧವ್ಯಗಳು ಗಟ್ಟಗೊಳ್ಳುವುದು ನಂಬಿಕೆ ಎಂಬ ಮೂರಕ್ಷರಗಳ ಮೇಲೆ. ನಾಳೆ ಎಂಬುದು ಒಳಿತನ್ನು ಹೊತ್ತು ತರಲಿದೆ, ಇಂದು ಸೋತರೇನು ನಾಳೆ ಗೆಲುವು ಶತಃಸಿದ್ಧ, ಕೆಡುಕಿನ ಪ್ರತಿನಿಧಿಗಳೇ ವಿಜೃಂಭಿಸುತ್ತಿದ್ದರೂ ನಾಳೆ ಎಂಬುದು ಅವರಿಗೆ ಕೊನೆಗಾಲ ಹಾಡುತ್ತದೆ ಎಂಬ ನಂಬಿಕೆಯೇ ಕಳೆಯಬೇಕಾದ ಬದುಕನ್ನು ಜೀವಂತವಾಗಿರಿಸುತ್ತದೆ. ಆಶಾಭಾವನೆಯಿಂದ ನೀರೀಕ್ಷೆ ಮಾಡುವಂತೆ ಪ್ರೇರೇಪಿಸುತ್ತದೆ. ಬದುಕಿನ ಅಂತಹ ಒಳ್ಳೆಯ, ಗಟ್ಟಿ ನಂಬಿಕೆಗಳನ್ನು ಇಟ್ಟುಕೊಳ್ಳುವ ಕುರಿತು ಡಾ. ಗೋವಿಂದ ಹೆಗಡೆಯವರ ಗಜಲ್ ಮಾತಾಡುತ್ತದೆ. ಎಲ್ಲವೂ ಒಮ್ಮೆ ಕೊನೆಯಾಗಲೇಬೇಕು ಎಂಬ ಮಹತ್ತರ ನಂಬಿಕೆ, ಜೀವಂತಿಕೆ ಇಟ್ಟುಕೊಳ್ಳುವಂತೆ ಒತ್ತಾಯಿಸುತ್ತದೆ. 

ಸಾಗುತ್ತಿರುವ ಕಲ್ಲು-ಮುಳ್ಳಿನ ದಾರಿ ಮುಗಿದು ಒಮ್ಮೆ ಹೂವಿನ ಹಾಸು ಕೈ ಬೀಸಿ ಕರೆಯುತ್ತದೆ ಕಾಯಬೇಕು. ಎಷ್ಟೇ ಗಾಢ ಕತ್ತಲು ಬಿಡದೇ ತಬ್ಬಿದ್ದರೂ ಅದನ್ನು ಸೀಳಿ ಬೆಳಕಿನ ಕಿರಣವೊಂದು ಬಳಿ ಬಂದು ಅಪ್ಪಲೇಬೇಕು ನೀರೀಕ್ಷೆ ಇರಬೇಕು. ಹೌದು, ನಡೆವ ದಾರಿಯಲ್ಲೆಲ್ಲ ಮುಳ್ಳುಗಳ ಸುರಿದು ಮೋಜು ನೋಡುವವರೇ ತುಂಬಿದ್ದಾರೆ ಇರಲಿ, ಇರಿದು ತಣಿಯುವ ಅತೃಪ್ತ ಆತ್ಮಗಳಿಗೂ ಒಮ್ಮೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ನಾವು ತಿಳಿದಿರಬೇಕು. ಕೂಡಿಸಲಾಗದಿದ್ದರೂ ಮನಸು ಒಡೆಯುವವರೇ ತುಂಬಿದ್ದಾರೆ, ಕಟ್ಟಲಾಗದಿದ್ದರೂ ಕನಸು ಕೆಡಿಸುವವರೇ ಹೆಚ್ಚಿದ್ದಾರೆ ಈ ಲೋಕದಲ್ಲಿ. ಆದರೆ ಎರಡು ಹೃದಯಗಳನ್ನು ಒಂದು ಮಾಡುವ ಕೈಗಳೇ ಎಲ್ಲರ ಪ್ರೀತಿಗೆ ಪಾತ್ರವಾಗುತ್ತವೆ ಎಂಬುದು ನೆನಪಿರಲಿ. ಎದೆಎದೆಗಳ ನಡುವೆ ಸೇತುವೆ ಕಟ್ಟುವವರೇ ಗೆಲ್ಲುತ್ತಾರೆ ಒಂದು ದಿನ. ಬಣ್ಣದ ಮುಖವಾಡಗಳೇ ಮೆರೆಯುತ್ತಿವೆ ನೈಜ ಮುಖಗಳನ್ನು ಹಿಂದೆ ಸರಿಸಿ. ಕೊನೆಗೂ ಸ್ವಂತಿಕೆಯೇ ತಳವೂರಿ ನಿಲ್ಲುತ್ತದೆ, ಮುಖವಾಡಗಳು ಬಯಲಾಗುತ್ತವೆ. ಕೇಳುವ ಕಿವಿಗಳು ಕಡಿಮೆಯಿರುವ ಈ ಲೋಕದಲ್ಲಿ ಎದೆಯ ಮಾತುಗಳನ್ನು ನೇರವಾಗಿ ಹೇಳಿಕೊಳ್ಳುವಾಗ ನಾಲಿಗೆ ತಡವರಿಸುತ್ತದೆ, ಗಂಟಲ ಸೆರೆಯುಬ್ಬಿ ಬರುತ್ತದೆ. ಆದರೂ ಪ್ರೀತಿಯೇ ಚಿರಕಾಲ ವಿಜಯ ಸಾಧಿಸುತ್ತದೆ ಇದು ಸರ್ವಕಾಲಿಕ ಸತ್ಯ ಅಲ್ಲಿಯವರೆಗೂ ನಂಬಿಕೆ ಕಳೆದುಕೊಳ್ಳದಿರೋಣ ಎಂಬ ಭರವಸೆ ಮೂಡಿಸುತ್ತದೆ ಡಾ. ಗೋವಿಂದ ಹೆಗಡೆ ಅವರ ಈ ಗಜಲ್‌. 

ಸದಾ ಒಳಿತಿಗಾಗಿಯೇ ಹಂಬಲಿಸೋಣ, ಕೆಡುಕಿಗೆ ಕೊನೆಗಾಲವಿದೆ ಎಂದು ನಂಬೋಣ ಎಂಬ ಆಶಯ ಅಭಿವ್ಯಕ್ತಿಸುವ ಹೆಗಡೆ ಅವರ ಈ ಗಜಲ್ ಕಾಡುತ್ತದೆ. ಸದಾಶಯದ ಕವಿಗೊಂದು ಅಂತರಾಳದ ನಮನ.  

- * * * -