ಬೆಳಗಾವಿ, ಆ1 ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೆರೆಪೀಡಿತ ಪ್ರದೇಶಗಳಲ್ಲಿ ಪ್ರವಾಸ ಆರಂಭಿಸಿದ್ದಾರೆ, ಶನಿವಾರ ಬೆಳಿಗ್ಗೆ ಬೆಳಗಾವಿಗೆ ಆಗಮಿಸಿದ ಕುಮಾರಸ್ವಾಮಿ ಅಧಿಕಾರಿಗಳಿಂದ ಪ್ರವಾಹ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಜಿಲ್ಲೆಯಲ್ಲಿ ಭಾರೀ ಹಾನಿಯುಂಟಾಗಿದೆ. ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಮಧುರೈ ಯಿಂದ 10 ಸಾವಿರ ಹೊದಿಕೆಗಳನ್ನು ತರಿಸಿ ಸಂತ್ರಸ್ತರಿಗೆ ನೀಡಲಾಗುವುದು ಎಂದರು.
ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ತನ್ನ ಪಾಲಿನ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಕೇಂದ್ರ ಸರ್ಕಾರ ಅನುದಾನ ಹಂಚಿಕೆ,ನೆರವು ನೀಡುವಲ್ಲಿ ಯಾವುದೇ ತಾರತಮ್ಯ ಮಾಡಬಾರದು. ರಾಜ್ಯದ ಜನರ ಸಂಕಷ್ಟಗಳಿಗೆ ಎಲ್ಲಾ ರೀತಿಯಲ್ಲೂ ನೆರವಾಗಬೇಕು. ಮೂರು ದಿನಗಳಿಂದ ಅನಾರೋಗ್ಯ ತಮ್ಮ ನ್ನು ಬಾಧಿಸಿದ್ದು, ಹೀಗಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ನೆರೆಹಾವಳಿ ಪ್ರದೇಶಗಳಿಗೆ ತಡವಾಗಿ ಭೇಟಿ ನೀಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನೆರೆ ಸಂತ್ರಸ್ತರಿಗೆ ನನ್ನಿಂದ ಕೈಲಾಗುವಷ್ಟು ಸಹಾಯ ಮಾಡುತ್ತೇನೆ. ಜನರಲ್ಲಿ ಮೊದಲು ಧೈರ್ಯ ತುಂಬುವ ಕೆಲಸ ಮಾಡಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅಗತ್ಯವಿದೆ. ಸಂತ್ರಸ್ತರಿಗೆ ಆಹಾರಧಾನ್ಯ ಅವಶ್ಯಕತೆಯಿದ್ದಲ್ಲಿ ಅದಕ್ಕೆ ಸಹಾಯ ಮಾಡುತ್ತೇನೆ. ಪ್ರವಾಹ ಪೀಡಿತರಿಗೆ ನೆರವು ನೀಡುವ ವಿಚಾರದಲ್ಲಿ ಸರ್ಕಾರದ ಜತೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಜನರನ್ನು ರಕ್ಷಿಸುವ ಹೊಣೆ ಇದೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರ. ಅಧಿಕಾರಿಗಳ ಮುಖಾಂತರ ಯಡಿಯೂರಪ್ಪ ಕೆಲಸ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಬೆಳಗಾವಿ ಬಳಿಕ ಶನಿವಾರ ಸಂಕೇಶ್ವರ, ನರಗುಂದ, ಚಿಕ್ಕೋಡಿ, ನವಲಗುಂದ, ಹುಬ್ಬಳ್ಳಿ -ಧಾರವಾಡ ಪ್ರದೇಶಗಳಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ತಂಡ ಪ್ರವಾಹ ಪರಿಶೀಲನೆ ನಡೆಸಲಿದೆ.