ಬೆಂಗಳೂರು, ನ 6: ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಡದ ಸರ್ಕಾರ ನೂರು ದಿನದ ಸಂಭ್ರಮಾಚರಣೆ ಮಾಡಿದೆ. ನೂರು ಸಾಧನೆಗಿಂತ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವುದು ಮುಖ್ಯ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನೂರು ಸಾಧನೆ ಬಗ್ಗೆ ತಾವೂ ಏನೂ ಹೇಳುವುದಿಲ್ಲ. ಸರ್ಕಾರನ್ನು ನಿಂದಿಸುವುದರಿಂದ ಕೆಲಸವೂ ಆಗುವುದಿಲ್ಲ. ಸರ್ಕಾರದ ನಿಂದನೆಗಿಂತ ಪ್ರವಾಹ ಪೀಡಿತರಿಗೆ ಶಾಶ್ವತ ಪರಿಹಾರ ದೊರೆಯುವುದು ಮುಖ್ಯ ಎಂದು ಸ್ಪಷ್ಟಪಡಿಸಿದರು. ನೆರೆ ಅನಾಹುತ ಸರಿಪಡಿಸುವಲ್ಲಿ ಮತ್ತು ಅಲ್ಲಿನ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಕಂದಾಯ ಸಚಿವರಾದವರಿಗೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಆದರೆ ಕಂದಾಯ ಸಚಿವ ಅಶೋಕ್ ಅವರಿಗಿನ್ನೂ ತಮ್ಮ ಜವಾಬ್ದಾರಿ ಅರಿವಾಗಿಲ್ಲ. ಅವರಿನ್ನೂ ಪ್ರವಾಹ ಪೀಡಿತ ಭಾಗಗಳಿಗೆ ಭೇಟಿ ನೀಡಿಲ್ಲ ಎಂದು ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿಯವರೆಗೆ ಬೆಳೆ ಪರಿಹಾರವನ್ನು ಸರ್ಕಾರ ನೀಡಿಲ್ಲ. ಫಸಲು ಕಳೆದುಕೊಂಡ ಕಬ್ಬು ಬೆಳೆಗಾರರಿಗೆ ಸರ್ಕಾರ ಬೆಳೆ ನಷ್ಟವನ್ನಾಧರಿಸಿ ಬೆಳೆ ಪರಿಹಾರ ಕೊಡಬೇಕೇ ವಿನಃ ಎನ್ ಡಿಆರ್ ಎಫ್ ನಿಯಮ ಪ್ರಕಾರ ಪರಿಹಾರ ಕೊಟ್ಟರಷ್ಟೇ ಸಾಲದು. ಪರಿಹಾರ ಕೊಡದೇ ಇರುವುದರಿಂದ ರೈತರು ಮತ್ತೆ ಫಸಲು ಬೆಳೆದಿಲ್ಲ. ಹೀಗಾಗಿ ಸರ್ಕಾರ ಇದರತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವರಾದ ಮಾಧುಸ್ವಾಮಿ ಹಾಗೂ ಆರ್.ಅಶೋಕ್ ಅವರಿಗೆ ಪತ್ರವನ್ನು ಬರೆಯಲಾಗಿದೆ ಎಂದರು. ಕಬ್ಬು ಬೆಳೆಗಾರರಿಗೆ ಒಂದು ಲಕ್ಷ ರೂ.ಒಂದು ಎಕರೆಗೆ ಪರಿಹಾರ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ಎಲ್ಲ ಸಂತ್ರಸ್ತರಿಗೂ ಪುನರ್ವಸತಿ ಕಲ್ಪಿಸುವ ಕೆಲಸ ಆಗಬೇಕು ಜೊತೆಗೆ ಶಾಶ್ವತ ಪರಿಹಾರ ಕೊಡುವಂತೆ ಆಗ್ರಹಿಸಿದರು. ಶೇ.90 ರಷ್ಟು ಜನ ನಮ್ಮ ಮನೆಗಳನ್ನು ಸ್ಥಳಾಂತರ ಮಾಡಿ ಎಂದು ಹೆಳುತ್ತಿದ್ದಾರೆ .ಆದರೆ ಸಚಿವರು ಅದಕ್ಕೆ ಗಮನಕೊಟ್ಟಂತೆ ಕಾಣಿಸುತ್ತಿಲ್ಲ . ಭಾಗಶಃ ಪೂರ್ಣವಾಗಿ ಬಿದ್ದ ಮನೆಗಳಿಗೆ ಮನೆ ಕಟ್ಟಿಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಅದೇ ಜಾಗದಲ್ಲಿ ಮತ್ತೆ ಮಳೆ ಬಂದು ನೀರು ತುಂಬಿಕೊಂಡು ಮನೆಗಳು ಮತ್ತೆ ಬಿದ್ದರೆ ಆಗ ಪುನಃ ಅವರಿಗೆ ಪರಿಹಾರ ಕೊಡುತ್ತೀರಾ ಎಂದು ಲೇವಡಿ ಮಾಡಿದರು.