ಧಾರವಾಡ 07: ಹಿರಿಯ ರಂಗಭೂಮಿ ಕಲಾವಿದ, ನಿರ್ದೇಶಕ, ಚಲನಚಿತ್ರ ನಟ, ಹಿಂದೂಸ್ತಾನಿ ಸುಗಮ ಸಂಗೀತ ಗಾಯಕರೂ ಆಗಿದ್ದ ರಂಗ ಬದುಕಿನ ಬೆಳ್ಳಿಚುಕ್ಕಿ ಬಸವರಾಜ ಮನಸೂರ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಸರಕಾರ ಚಿಂತನೆ ಮಾಡಬೇಕೆಂದು ಕನ್ನಡ ಪತ್ರಿಕಾರಂಗದ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಆಗ್ರಹಿಸಿದ್ದಾರೆ.
ಅವರು ಇಲ್ಲಿಯ ಆಲೂರ ವೆಂಕಟರಾವ್ ಸಭಾಭವನದಲ್ಲಿ ಬಸವರಾಜ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಎಸ್.ಎಸ್. ಜೀವಣ್ಣವರ ಎಜ್ಯುಕೇಷನಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನೃತ್ಯ, ಸಂಗೀತ, ಜಾನಪದ ಕಲಾ ರಂಗೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಸರಳ, ಸಜ್ಜನಿಕೆಯ ಸಾತ್ವಿಕ ವ್ಯಕ್ತಿತ್ವವನ್ನು ಹೊಂದಿದ್ದ ಬಸವರಾಜ ಮನಸೂರ ಅವರು ತಮ್ಮ ಅಖಂಡ ಬದುಕನ್ನೇ ರಂಗಭೂಮಿಗೆ ಸಮರ್ಿಸಿಕೊಂಡಿದ್ದರು. ತಾವು ಅಭಿನಯಿಸಿದ ಎಲ್ಲ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಬಸವರಾಜರು ಅಭಿನಯದಲ್ಲಿ ನಿಜಕ್ಕೂ ‘ನಟಶೇಖರ’ರೇ ಆಗಿದ್ದರು ಎಂದರು.
ಸದಾ ಹಸನ್ಮುಖಿ : ಆರ್ಥಿಕ ಹಿನ್ನೆಡೆಯೂ ಸೇರಿದಂತೆ ಜೀವನದುದ್ದಕ್ಕೂ ಕಾಡಿದ ವಿಭಿನ್ನ ನೆಲೆಯ ಅನೇಕ ನೋವುಗಳನ್ನು ನುಂಗಿಕೊಂಡು ಸದಾ ಹಸನ್ಮುಖಿಯಾಗಿ ಇತರರನ್ನು ನಗಿಸಿ ಖುಷಿ ಪಡಿಸುತ್ತಿದ್ದ ಬಸವರಾಜರ ಮುಕ್ತ ಮನಸ್ಸು ಅವರೊಂದಿಗೆ ಒಂದೇ ಓಣಿಯಲ್ಲಿ ಹಲವು ವರ್ಷಗಳ ಕಾಲ ಜೊತೆಗಿದ್ದ ತಮಗೆ ಅನುಭವಕ್ಕೆ ಬಂದಿದೆ ಎಂದೂ ಯರಗಂಬಳಿಮಠ ನುಡಿದರು.
ಕಲಾ ರಂಗೋತ್ಸವ ಉದ್ಘಾಟಿಸಿದ ಕೂಡಲ ಸಂಗಮ ಕ್ಷೇತ್ರದ ಶ್ರೀಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಅನೇಕ ಮೇರು ಕಲಾವಿದರನ್ನು ನಾಡಿಗೆ ನೀಡಿದ ಧಾರವಾಡದ ಹತ್ತಿರದಲ್ಲಿಯೇ ಇರುವ ಮನಸೂರ ಗ್ರಾಮವು ರಂಗಭೂಮಿ ಮತ್ತು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಶಾಶ್ವತವಾಗಿದೆ. ಖ್ಯಾತ ಕಲಾವಿದರಾದ ಬಸವರಾಜ ಮನಸೂರ ಮತ್ತು ಮಲ್ಲಿಕಾರ್ಜುನ ಮನಸೂರ ಸಹೋದರರ ಕಲೆಯ ನೆನಹು ಇಂದಿಗೂ ಹಸಿರಾಗಿದ್ದು, ಪ್ರತೀ ವರ್ಷ ರಂಗೋತ್ಸವದ ಮೂಲಕ ಇವರ ಸ್ಮರಣೆ ಮಾಡುತ್ತಿರುವುದು ಶ್ಲ್ಯಾಘನೀಯ ಕೆಲಸವಾಗಿದೆ ಎಂದರು.
ತಾ.ಪಂ. ಮಾಜಿ ಅಧ್ಯಕ್ಷ ಮಹಾದೇವಪ್ಪ ದಂಡಿನ, ಉದ್ಯಮಿ ಸಿದ್ಧಣ್ಣ ಪೂಜಾರ, ಅಶೋಕ ಮಾಳಣ್ಣವರ, ಮನಸೂರ ಗ್ರಾ.ಪಂ. ಅಧ್ಯಕ್ಷ ಕರೆಪ್ಪ ಎತ್ತಿನಗುಡ್ಡ, ಶಾಂತೇಶ ಚಿಕ್ಕಲಕಿ ಅತಿಥಿಗಳಾಗಿದ್ದರು.
ಪ್ರಶಸ್ತಿ ಪ್ರದಾನ : ಬ್ರಹ್ಮಕುಮಾರಿ ಜಯಂತಿ ಅಕ್ಕ, ರಾಜು ಮರಳಪ್ಪನವರ, ವೀರಭದ್ರ್ಪ ನವಲಗುಂದ, ಆರ್.ಎಸ್. ಗುಲಗಂಜಿಕೊಪ್ಪ, ಪುಷ್ಪಾ ಬಾಗಲವಾಡಿ, ಪತ್ರಕರ್ತರಾದ ಬಸವರಾಜ ಆನೇಗುಂದಿ ಮತ್ತು ವಿಠ್ಠಲ ಕರಡಿಗುಡ್ಡ, ಡಾ. ಸಂತೋಷ ಜೀವಣ್ಣವರ, ಡಾ. ಶರಣಕುಮಾರ ಮೇಡೆದಾರ, ಪ್ರಭು ಕುಂದರಗಿ, ಬಿ.ಕೆ.ಸೋದರ, ಪ್ರವೀಣ ಜೀವಣ್ಣವರ, ಬಸಲಿಂಗವ್ವ ದೊಡವಾಡ, ಪದ್ಮಾವತಿ ಅಣ್ಣಿಗೇರಿ, ಬಸವರಾಜ ಯರಿಹಕ್ಕಲ, ಯಕ್ಕೇರ್ಪ ನಡುವಿನಮನಿ, ಹಜರತಲಿ ನದಾಫ್, ರಮೇಶ ನಲವಡಿ ಸೇರಿದಂತೆ ಇತರರಿಗೆ ‘ಕರ್ನಾಟಕ ಸಾಧನಾ ಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಹಿರಿಯ ಕಲಾವಿದರಾದ ಇಮಾಮಸಾಬ ವಲ್ಲೆಪ್ಪನವರ, ಲಕ್ಷ್ಮಿಬಾಯಿ ಹರಿಜನ, ಮಹಮ್ಮದಲಿ ಗೂಢೂಬಾಯಿ, ಡಾ. ಪ್ರಕಾಶ ಮಲ್ಲಿಗವಾಡ ಅವರನ್ನೂ ಗೌರವಿಸಲಾಯಿತು.
ಶಿವಾನಂದ ಅಮರಶೆಟ್ಟಿ ಸ್ವಾಗತಿಸಿದರು. ಆರತಿ ಕುಂಬಾರಕೊಪ್ಪ ನಿರೂಪಿಸಿದರು. ಲಕ್ಷ್ಮಿ ಹಿರೇಕುಂಬಿ ವಂದಿಸಿದರು. ವಿವಿಧ ಕಲಾಪ್ರಕಾರಗಳ ಕಲಾವಿದರು ರಂಗೋತ್ಸವದಲ್ಲಿ ತಮ್ಮ ಹಾಡುಗಾರಿಕೆಯನ್ನು ಪ್ರಸ್ತುತಪಡಿಸಿದರು.