ವೈದ್ಯರ ಹಿತಕಾಪಾಡಲು ಸರ್ಕಾರ ಬದ್ಧ : ಅಮಿತ್ ಶಾ

ನವದೆಹಲಿ, ಏ 22,ವೈದ್ಯರ ಕ್ಷೇಮಕ್ಕೆ ಮತ್ತು ಭದ್ರತೆಗೆ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಭರವಸೆ ನೀಡಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ಐಎಂಎ ಯ ವೈದ್ಯರು ಮತ್ತು ಹಿರಿಯ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರ ಪಾತ್ರವನ್ನು ಶ್ಲಾಘಿಸಿದರು. ವೈದ್ಯರು ಈವರೆಗೆ ತೋರಿರುವ ಬದ್ಧತೆಯನ್ನು ಮುಂದುವರಿಸಲಿದ್ದಾರೆ ಎಂಬ ವಿಶ್ವಾಸವನ್ನೂ ಅವರು ಇದೇ ವೇಳೆ ವ್ಯಕ್ತಪಡಿಸಿದರು. ಕೊರೊನಾ ಹೋರಾಟದ ಸಂದರ್ಭದಲ್ಲಿ ವೈದ್ಯರ ಭದ್ರತೆ ಬಗೆಗಿನ ಕಳವಳಕ್ಕೆ ಸಮ್ಮತಿಸಿದ ಅವರು, ವೈದ್ಯರ ಹಿತಕಾಪಾಡುವ ಯಾವ ಅವಕಾಶವನ್ನೂ ಮೋದಿ ಸರ್ಕಾರ ಕೈಚೆಲ್ಲುವುದಿಲ್ಲ ಎಂದು ಭರವಸೆ ನೀಡಿದರು.ಆರೋಗ್ಯ ವೃತ್ತಿಪರರ ಮೇಲಿ ಇತ್ತೀಚೆಗೆ ನಡೆದ ಹಲ್ಲೆಗಳನ್ನು ಖಂಡಿಸಿದ ಅಮಿತ್ ಶಾ, ಪ್ರಧಾನಮಂತ್ರಿ ನರೇಂದ್ರ ಮೋದಿ ವೈದ್ಯರಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಮೇಲೆ ಗಮನಹರಿಸುತ್ತಿರುವುದಾಗಿ ತಿಳಿಸಿದರು. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೂಡ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದರು. ಕೇಂದ್ರ ಸರ್ಕಾರದ ಭರವಸೆಯ ಕಾರಣ ಐಎಮ್ಎ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂಪಡೆದಿದೆ. ಸಾಂಕೇತ ಪ್ರತಿಭಟನೆ ಕೂಡ ದೇಶದ ಹಿತ ಮತ್ತು ಜಾಗತಿಕ ಹಿತಕ್ಕೆ ಮಾರಕವಾಗಿದ್ದು ಪ್ರಸ್ತಾವಿತ ಸಾಂಕೇತಿಕ ಪ್ರತಿಭಟನೆಯನ್ನು ನಡೆಸದಂತೆ ಸಚಿವರು ಮನವಿ ಮಾಡಿದರು. ಕೇಂದ್ರ ಆರೋಗ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಹಿರಿಯ ವೈದ್ಯರು ಮತ್ತು ನೀತಿ ಆಯೋಗದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.