ಬೆಂಗಳೂರು, ಜೂನ್. 6,ಕೊರೊನಾ ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಲ್ಲಿ ಸರ್ಕಾರ ಬಿಬಿಎಂಪಿ ವಿಫಲವಾಗಿದ್ದು, ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ತಾರತಮ್ಯ ಮಾಡಿ ಕಡಿಮೆ ಆಹಾರದ ಕಿಟ್ ವಿತರಿಸಲಾಗಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಸೇರಿ 7 ಲಕ್ಷ ಆಹಾರದ ಕಿಟ್ ನೀಡಿದೆ. ಆದರೆ, ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ಮಾತ್ರ ಕಡಿಮೆ ನೀಡಿದ್ದಾರೆ. 10 ಜನ ಶಾಸಕರ ಕ್ಷೇತ್ರಗಳಿಗೆ ಕೇವಲ 50 ಸಾವಿರ ಕಿಟ್ ನೀಡಲಾಗಿದೆ. ಉಳಿದ ಕಿಟ್ ಗಳನ್ನು ಬಿಜೆಪಿ ಕಾರ್ಯಕರ್ತರು ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ವಲಸೆ ಕಾರ್ಮಿಕರು ಇಲ್ಲವೇ? ಕಾಂಗ್ರೆಸ್ ನಿಂದಲೇ ಸುಮಾರು 10 ಲಕ್ಷ ಆಹಾರದ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಯಿತು ಎಂದರು.
ವಲಸೆ ಕಾರ್ಮಿಕರನ್ನು ಸರ್ಕಾರ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅನೇಕ ಕಾರ್ಮಿಕರು ಊರುಗಳಿಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಲಾಕ್ ಡೌನ್ ಸಮಯದಲ್ಲಿ ಕಾಂಗ್ರೆಸ್ ನಿಂದ 5.85 ಲಕ್ಷ ಮಾಸ್ಕ್, 93 ಲಕ್ಷ ಆಹಾರ ಪ್ಯಾಕೆಟ್, 10 ಲಕ್ಷ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು. ರೈತರಿಗೆ ತೊಂದರೆ ಆಗಿರುವುದನ್ನು ಪರಿಹರಿಸಲು 1312 ಟನ್ ತರಕಾರಿ ಖರೀದಿಸಿ ಜನರಿಗೆ ಹಂಚಿಕೆ ಮಾಡಲಾಗಿದೆ ಎಂದರು.ಈಗ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮೇ 31ರವರೆಗೂ ಲಾಕ್ ಡೌನ್ ಬಿಗಿಯಾಗಿರಬೇಕಿತ್ತು. ಬೇಗ ಸಡಿಲಿಕೆ ಮಾಡಿರುವುದರಿಂದ ರಾಜ್ಯದಲ್ಲಿ ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಸರ್ಕಾರ ಅವಸರ ಮಾಡುವುದು ಬೇಡ, ಇನ್ನು ಎರಡು ಮೂರು ತಿಂಗಳು ಶಾಲೆಗಳನ್ನು ತೆರೆಯುವುದು ಬೇಡ. ಬೇರೆ ದೇಶಗಳಲ್ಲಿ ಶಾಲೆ ಪ್ರಾರಂಭವಾದ ನಂತರ ಮಕ್ಕಳಿಗೆ ಕೊರೊನಾ ಸೋಂಕು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಶಾಲೆ ತೆರೆಯಲು ಅವಸರ ಮಾಡದಂತೆ ರಾಮಲಿಂಗಾರೆಡ್ಡಿ ಸರ್ಕಾರಕ್ಕೆ ಸಲಹೆ ನೀಡಿದರು. ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಹೈಕಮಾಂಡ್ ಅಂತಿಮ ಮಾಡಿದೆ. ಇದನ್ನು ಏಕಾಏಕಿ ಘೋಷಣೆ ಎನ್ನಲಾಗುವುದಿಲ್ಲ. ಈಗೆಲ್ಲ ಮೊಬೈಲ್ ಇದೆ. ಅದರಲ್ಲಿಯೇ ಅಭಿಪ್ರಾಯ ಕೇಳುತ್ತಾರೆ. ಖರ್ಗೆ ಹೆಸರು ಮುನ್ನಲೆಗೆ ಬಂದ ಬಳಿಕ ಅದೇ ಅಂತಿಮವಾಗಿದೆ. ಖರ್ಗೆ ಒಬ್ಬ ಉತ್ತಮ ಸಂಸದೀಯ ಪಟು. ಅಂತವರು ಸಂಸತ್ ಮತ್ತು ರಾಜ್ಯಸಭೆಯಲ್ಲಿ ಇರಬೇಕು. ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಅವರನ್ನು ಟಾರ್ಗೆಟ್ ಮಾಡಿ ಸೋಲಿಸಿದ್ದರು. ನೆಹರು, ಅಟಲ್ ಬಿಹಾರಿ ವಾಜಪೇಯಿ ಅವರೇ ಲೋಕಸಭೆಯಲ್ಲಿ ಖರ್ಗೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ನಿಮ್ಮಂಥವರು ರಾಜಕಾರಣ ದಲ್ಲಿ ಇರಬೇಕು ಎಂದು ಹೇಳಿದ್ದರು. ಆಡಳಿತ ಮತ್ತು ವಿಪಕ್ಷದ ನಡುವೆ ಹೋರಾಟ ಇರಬೇಕು. ಆದರೆ ಈಗ ಸರ್ಕಾರವನ್ನು ಟೀಕಿಸುತ್ತಾರೆ ಎನ್ನುವ ಕಾರಣಕ್ಕಾಗಿ ಸೋಲಿಸುವ ರಾಜಕಾರಣ ನಡೆಯುತ್ತಿದೆ ಎಂದು ಆಪಾದಿಸಿದರು.ನಮ್ಮಲ್ಲಿ ಹೆಚ್ಚು ಮತಗಳು ಇವೆ. ಹೈಕಮಾಂಡ್ ಜೆಡಿಎಸ್ ಅನ್ನು ಬೆಂಬಲಿಸುವ ಬಗ್ಗೆ ತೆಗೆದುಕೊಳ್ಳುವ ಎಲ್ಲಾ ರೀತಿಯ ತೀರ್ಮಾನಕ್ಕೆ ತಾವು ಬದ್ಧ. ದೇವೇಗೌಡರಂತವರು ಸಂಸತ್ ನಲ್ಲಿ ಇರಬೇಕು ಎಂದು ರಾಮಲಿಂಗಾರೆಡ್ಡಿ ಸೂಚ್ಯವಾಗಿ ತಿಳಿಸಿದರು.