ಕೋವಿಡ್ 19 ನಿಯಂತ್ರಣಕ್ಕೆ ಸರ್ಕಾರದ ಪ್ರಯತ್ನ ಸಾಕಾಗದು: ಎಚ್.ಕೆ.ಪಾಟೀಲ್

ಬೆಂಗಳೂರು, ಏ.1,ರಾಜ್ಯದಲ್ಲಿ ತ್ಯಾಜ್ಯ ವಿಲೇವಾರಿ ಬಹುದೊಡ್ಡ  ಸವಾಲಾಗಿದ್ದು,  ಈ ತ್ಯಾಜ್ಯ ವಿಲೇವಾರಿಯನ್ನು ಆಸ್ಪತ್ರೆಗಳ ಬಯೋ ಮೆಡಿಕಲ್  ವೇಸ್ಟ್ ವಿಲೇವಾರಿ ಮಾಡಿದಂತೆ ತ್ಯಾಜ್ಯ ವಿಲೇವಾರಿ ಮಾಡಬೇಕಾದದ್ದು ಮತ್ತು ಅದಕ್ಕೆ  ಸೂಕ್ತವಾದಂತಹ ವ್ಯವಸ್ಥೆ ಕಲ್ಪಿಸಬೇಕಾದಂತದ್ದು ಅಗತ್ಯ. ಈ ತ್ಯಾಜ್ಯ ಸಮರ್ಪಕವಾಗಿ  ವಿಲೇವಾರಿಯಾಗದಿದ್ದರೆ ಮುಂಬರುವ ದಿನಗಳಲ್ಲಿ ಮಹಾಮಾರಿಯ ಸೋಂಕು ಇಲ್ಲಿಂದಲೇ ಹರಡುವ  ಸಾಧ್ಯತೆಗಳು ಇಲ್ಲದಿಲ್ಲ. ಬೆಂಗಳೂರಿನಲ್ಲಿ ಮತ್ತು ಸೋಂಕಿತ ಮತ್ತು ಶಂಕಿತ ಇತರ  ಪ್ರದೇಶಗಳಲ್ಲಿ ಇಂಥ ಕ್ರಮದ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಅವರು, ವಿಶ್ವಾದ್ಯಂತ  ಮಹಾಮಾರಿ ಕೊರೋನಾ ವೈರಸ್ (ಕೋವಿಡ್-19)ರಿಂದ ಜನರನ್ನು ರಕ್ಷಿಸಲು ಇಡೀ ವಿಶ್ವ  ಆತಂಕಕ್ಕೀಡಾಗಿ ಗಂಭೀರವಾದ ಪರಿಸ್ಥಿತಿ ಎದುರಿಸುತ್ತಾ ಹಲವಾರು ಮುನ್ನೆಚ್ಚರಿಕೆ  ಕ್ರಮಗಳನ್ನು ಕೈಗೊಳ್ಳುತ್ತಾ, ಹೊಸ ಹೊಸ ಅನುಭವಗಳನ್ನು ಪಡೆಯುತ್ತಿದೆ. ಸರ್ಕಾರಗಳು  ಮಾಡುತ್ತಿರುವ ಪ್ರಯತ್ನಗಳು ಸಾಲದು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕರ್ನಾಟಕ  ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಕೆಲವು ಕ್ರಮಗಳನ್ನು ಕೈಗೊಳ್ಳುವಲ್ಲಿ ಆಗಿರುವ ಲೋಪ ಮಹಾಮಾರಿಯ ಹರಡುವಿಕೆ ಇನ್ನಷ್ಟು ಹೆಚ್ಚಾಗಬಹುದೆಂಬ ಕಳವಳ ಉಂಟಾಗಿದೆ. ಈ  ಕಳವಳಕ್ಕೆ ಹಲವಾರು ಕಾರಣಗಳಿವೆ ಮತ್ತು ಪರಿಹಾರಕ್ಕೆ ಅನೇಕ ಮಾರ್ಗಸೂತ್ರಗಳಿವೆ. ಸರ್ಕಾರ  ಮುಕ್ತ ಮನಸ್ಸಿನಿಂದ ಹಲವಾರು ಸಲಹೆಗಳನ್ನು ಸ್ವೀಕರಿಸಬೇಕಾಗಿದೆ ಮತ್ತು ತಾರ್ಕಿಕ ಅಂತ್ಯ  ಕಾಣುವ ಕ್ರಮಗಳನ್ನು ನಿರ್ವಂಚನೆಯಿಂದ ಕೈಗೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಕೋವಿಡ್-19ರ  ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಾದಷ್ಟು ಬೇಗ ತಪಾಸಣೆಗಳನ್ನು ಕೈಗೊಳ್ಳುವ ಬಗ್ಗೆ  ಚರ್ಚಿಸಿದ್ದೇವೆ. ಆದರೆ ಈ ತಪಾಸಣೆಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ದಕ್ಷಿಣ  ಕೋರಿಯಾ ರಾಷ್ಟ್ರದಲ್ಲಿ ಸಾಮೂಹಿಕ ತಪಾಸಣೆ (Mass Testing)ಗಳನ್ನು ನಡೆಸಿ  ತ್ವರಿತಗತಿ(Rapid test)ತಪಾಸಣೆಯನ್ನು ಕೈಗೊಳ್ಳಲಾಯಿತು.

ಈ ತಪಾಸಣೆಗಳ ಫಲಿತಾಂಶವು ಶೇ.  85 ರಷ್ಟು ನಿಖರವಾಗಿರುತ್ತದೆ ಮತ್ತು 10 ನಿಮಿಷದಲ್ಲಿ ವರದಿ ಕೈಗೆ ಲಭ್ಯವಾಗುತ್ತದೆ. ಈ  ತಪಾಸಣಾ ಕಿಟ್ಗಳನ್ನು ICMR ಅನುಮೋದಿತ ಪುಣೆಯ  National Institute of Virology   ಉತ್ಪಾದಿಸುತ್ತಿದೆ. ಈ ಕಿಟ್ಗಳನ್ನು ತರಿಸಿಕೊಂಡು ಸಾಮೂಹಿಕ ತಪಾಸಣೆಗಳನ್ನು  ನಡೆಸುವುದು ಅಗತ್ಯವಿದೆ. ಈ ತಪಾಸಣೆಗಳು ಪ್ರತಿ ತಪಾಸಣೆಗೆ ಈಗಿನ 2500ಕ್ಕಿಂತ ಅತ್ಯಂತ  ಕಡಿಮೆ ದರದಲ್ಲಿ ಅಂದರೆ ಪ್ರತಿ ತಪಾಸಣೆಗೆ 500/600 ರೂಪಾಯಿ ಮಾತ್ರ ವೆಚ್ಚವಾಗುತ್ತದೆ.  ಇಂಥ ಕ್ರಮ ಕೈಗೊಂಡಲ್ಲಿ ಕೋವಿಡ್-19 ಮಹಾಮಾರಿಯ ಹರಡುವಿಕೆಯನ್ನು ಸಂಪೂರ್ಣ ಅರಿಯಲು ಹಾಗೂ  ಸೂಕ್ತ ಕ್ರಮ ವಹಿಸಲು ಸಾಧ್ಯವಾಗುವುದು. ಈ ಕಿಟ್ಗಳನ್ನು ಎಲ್ಲಾ ಜಿಲ್ಲಾ  ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಒದಗಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.ಎಲ್ಲಾ  ಜಿಲ್ಲಾ ಕೇಂದ್ರಗಳಲ್ಲಿ ಒಂದರಂತೆ (ಲ್ಯಾಬೊರೇಟರಿ) ಪ್ರಯೋಗಾಲಯ ಸ್ಥಾಪಿಸಲೇಬೇಕು.  

ಇದಕ್ಕಾಗಿ ಇನ್ನೂ ಕಾರ್ಯ ನಡೆದಿಲ್ಲ. ಬೆಳಗಾವಿ ವಿಭಾಗದಲ್ಲಿ ಒಂದೂ ಪ್ರಯೋಗಾಲಯ ಇಲ್ಲ.  ಎಲ್ಲಾ ತಪಾಸಣೆಗಳಿಗೂ ಬೆಂಗಳೂರಿಗೆ ಬರಬೇಕು.  ಒಂದು ತಿಂಗಳ ನಂತರವೂ  ಬೆಳಗಾವಿ/ಹುಬ್ಬಳ್ಳಿಯಲ್ಲಿ ಪ್ರಯೋಗಾಲಯ ಇಲ್ಲವೆಂದರೆ ಹೇಗೆ? ತಮ್ಮ ತುರ್ತು ಗಮನ ಈ  ವಿಷಯದತ್ತ ಅಗತ್ಯ. ಸಂಬಂಧಿಸಿದವರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.ಕೋವಿಡ್-19  ಚಿಕಿತ್ಸೆ ನೀಡಲು ಸಿದ್ಧಗೊಳಿಸುವ ಅನೇಕ ಆಸ್ಪತ್ರೆಗಳಲ್ಲಿ Personal Protective  Equipment (PPE)/Mask ಮೊದಲು ಮಾಡಿಕೊಂಡು  ಮಲ್ಟಿ  ಚಾನಲ್ ಮಾನಿಟರ್   ಇ.ಸಿ.ಜಿ     ಮಾನಿಟರ್ ಸೇರಿ ಇನ್ನೂ ಹಲವು ಅಗತ್ಯತೆಗಳನ್ನು ಪೂರೈಸಬೇಕಿದೆ. ಬಹುದೊಡ್ಡ ಸಿದ್ಧತೆ  ಮಾಡಿಕೊಳ್ಳುವ ಈ ಸಂದರ್ಭದಲ್ಲಿ ಪಾಲೋ ಅಪ್ ಸಭೆಗಳು, ಸರ್ಕಾರದ ನಿಲುವುಗಳನ್ನು  ಪಾರದರ್ಶಕವಾಗಿ ತಿಳಿಸುವುದು ಆಗಲೇಬೇಕು. ಪಾರದರ್ಶಕವಾಗದೇ ಹೋದರೆ ಗೊಂದಲ  ಸೃಷ್ಟಿಯಾಗುವುದು ಎಂದು ಪಾಟೀಲ್ ಹೇಳಿದ್ದಾರೆ.ಆಸ್ಪತ್ರೆಗಳು/ನಗರಗಳು/ಹಳ್ಳಿಗಳನ್ನು  ಕಾಲಕಾಲಕ್ಕೆ ಸೋಂಕಿನಿಂದ ಸ್ವಚ್ಚಗೊಳಿಸಲು ಶೇ. 1ರಷ್ಟು Sodium Hypochlorite  Solution ನ್ನು ಸಿಂಪಡಿಸುವ ಮೂಲಕ ಹರಡುವಿಕೆಯನ್ನು ನಿಯಂತ್ರಿಸಬಹುದು. 

ಆಸ್ಪತ್ರೆಗಳಲ್ಲಿ ಪ್ರತಿ 4 ಗಂಟೆಯಿಂದ 6 ಗಂಟೆಗೆ ಒಂದು ಸಾರಿ ಮತ್ತು ನಗರ ಹಳ್ಳಿಗಳನ್ನು  ದಿನಕ್ಕೆ 1 ಸಾರಿ ಈ ರೀತಿ ಸಿಂಪಡಣೆ ಕಾರ್ಯ ಕೈಗೊಳ್ಳುವುದು ಅತ್ಯಗತ್ಯ. ಎಲ್ಲಾ  ಜೀವರಕ್ಷಕ ಆರೋಗ್ಯ ಕಾರ್ಯಕರ್ತರನ್ನು ತಕ್ಷಣ ಸೂಕ್ತವಾದ Personal Protective  Equipment (PPE) ಗಳನ್ನು ಒದಗಿಸಬೇಕೆಂದು ದಿನಾಂಕ 26.3.2020 ರಂದು ನಾನು ತಮಗೆ ಪತ್ರ  ಮುಖೇನ ಮತ್ತು ಟ್ವೀಟ್ ಮುಖಾಂತರ ಕಳಕಳಿಯ ಮನವಿ ಮಾಡಿದ್ದೆ. ದಿನಾಂಕ 31.3.2020 ರಂದು  ವೈದ್ಯಕೀಯ ಶಿಕ್ಷಣ ಸಚಿವರ ಹೇಳಿಕೆಯನ್ನು ಗಮನಿಸಿದೆ. Personal Protective  Equipment (PPE) ಗಳ ಪೂರೈಕೆಗೆ ಕಾರ್ಯಾದೇಶ ನೀಡಿರುವುದಾಗಿ ಮತ್ತು 75,000 ಇಂಥ  ಸಾಮಗ್ರಿ ಬರುವುದು ಬಾಕಿ ಇದೆ ಎಂದು ಹೇಳಿರುತ್ತಾರೆ. ಇಂದಿನ ಪರಿಸ್ಥಿತಿಯಲ್ಲಿ ವೈದ್ಯರು  ಮತ್ತು ಆರೋಗ್ಯ ಕಾರ್ಯಕರ್ತರೇ ಮುಂಚೂಣಿಯಲ್ಲಿರುವ ಯೋಧರು. ಅವರ ರಕ್ಷಣೆ ಮತ್ತು ಹಿತ  ರಕ್ಷಣೆ ನಮ್ಮ ಪ್ರಥಮ  ಆದ್ಯತೆಯಾಗಿರಲೇಬೇಕು. ಈ Personal Protective Equipment (PPE) ಗಳನ್ನು ಪಡೆಯಲು  ಅದಕ್ಕಾಗಿ ವಿಶೇಷ ವಿಮಾನವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕಳಿಸಬೇಕಾದರೂ  ಅಂಥ ಕ್ರಮ ತಕ್ಷಣ ಕೈಗೊಳ್ಳುವುದು ಸೂಕ್ತ. ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ  ದುರಂತಕ್ಕೆ ಕಾರಣವಾದೀತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.ನಮ್ಮನ್ನೆಲ್ಲ  ರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿ, ಸ್ವಯಂ ಸೇವಕರು ಮತ್ತು  ಸಮಾಜದ ವಿವಿಧ ಸ್ತರಗಳ ನಾಗರೀಕರು ಇವರೆಲ್ಲರ ವೈಯಕ್ತಿಕ ಸುರಕ್ಷತೆ ಮುಂಬರುವ ದಿನಗಳಲ್ಲಿ  ಸವಾಲಾಗಿ ಪರಿಣಮಿಸುವ ಲಕ್ಷಣಗಳಿವೆ.

ಆರೋಗ್ಯ ಕಾರ್ಯಕರ್ತರು ಮತ್ತು ಈ ಕೆಲಸದಲ್ಲಿ  ನಿರತರಾಗಿರುವ ಎಲ್ಲಾ ವ್ಯಕ್ತಿಗಳಿಗೂ Hydroxychloroquine (HCQ) (Prophylactic  tablet) ಒದಗಿಸಬೇಕಾದದ್ದು ಅತ್ಯಂತ ಅವಶ್ಯಕವಾಗಿದೆ ಎಂಬ ವೈದ್ಯಕೀಯ ಸಲಹೆ ಇದೆ.  ಇವರೆಲ್ಲರಿಗೂ ತೊಂದರೆಯಾದರೆ ಆರೋಗ್ಯ ರಕ್ಷಣೆ ವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ. ಇದು  ಕೂಡ ಯಾವುದೇ ನಿರ್ಲಕ್ಷ್ಯ ವಹಿಸದೇ ಪಡೆದುಕೊಂಡು ಎಲ್ಲೆಡೆ ರವಾನಿಸಬೇಕು. ರಾಜ್ಯದಲ್ಲಿ  ಕೋವಿಡ್-19 ಗಾಗಿ ಪ್ರತ್ಯೇಕ ವಾರ್ಡ್ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಈ  ವಾರ್ಡ್ಗಳಲ್ಲಿ ವೆಂಟಿಲೇಟರ್ಗಳನ್ನು ಸಂಪರ್ಕಿಸಿ ಸಿದ್ಧತೆಯಲ್ಲಿಡಬೇಕಾದ  ಗುತ್ತಿಗೆಯನ್ನು ಕೆಲವರಿಗೆ ನೀಡಲಾಗಿದೆ ಎಂದು ತಿಳಿದೆ. ಆದರೆ ಈ ಗುತ್ತಿಗೆದಾರರಿಗೆ  Mehta Metals ಗುಜರಾತನಿಂದ ಆಕ್ಸಿಜನ್ ಸಿಲೆಂಡರ್ನಿಂದ ವೆಂಟಿಲೇಟರ್ವರೆಗೆ ಆಕ್ಸಿಜನ್  ಪೂರೈಸುವ ತಾಮ್ರದ ಪೈಪುಗಳ ಪೂರೈಕೆಯಾಗುತ್ತಿಲ್ಲವೆಂದು ಗೊತ್ತಾಗಿದೆ. ಈ ಕುರಿತು  ನಿನ್ನೆ ಸುದ್ದಿ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿದೆ. ಈ ಪೈಪುಗಳನ್ನು  ಗುತ್ತಿಗೆದಾರರೇ ಸಾಗಾಣಿಕೆ ಮಾಡಿಕೊಳ್ಳಬೇಕೆಂಬ ನಿರೀಕ್ಷೆ ನಮ್ಮ ನಿಮ್ಮೆಲ್ಲರನ್ನು  ನಿರಾಸೆಗೊಳಿಸಿ ಅನಾಹುತಕ್ಕೆ ಕಾರಣವಾದೀತು. ಇದಕ್ಕಾಗಿ ಗುಜರಾತ್ ಮುಖ್ಯಮಂತ್ರಿಯೊಂದಿಗೆ  ಸ್ವತಃ ತಾವೇ ಚರ್ಚಿಸಿ ವಿಶೇಷ ಸಂದರ್ಭವಾಗಿರುವುದರಿಂದ ಸರ್ಕಾರವೇ ಒಂದು ವಿಶೇಷ  ವಿಮಾನವನ್ನು ಕಳಿಸಿ ತರಿಸಿಕೊಳ್ಳುವುದು ಸೂಕ್ತವೆಂದೆನಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ  ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಸ್ಯಾನಿಟೈಸರ್ ಗಳ ಕೊರತೆ ಎದುರಾಗಬಹುದು. ಸಹಕಾರಿ  ರಂಗದಲ್ಲಿ ಕಾರ್ಯನಿರ್ವಹಿಸುವ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದ ಮೇಲ್ವಿಚಾರಣೆಯಲ್ಲಿ  ಅಥವಾ ಆಯಾ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸ್ಯಾನಿಟೈಸರ್ ತಯಾರಿಸಲು ಮತ್ತು  ಪೂರೈಸಲು ಅನುಮತಿ ನೀಡುವುದು ಅತ್ಯಂತ ಅಗತ್ಯ. ಈ ಕಾರ್ಖಾನೆಗಳಿಗೆ ಸ್ಯಾನಿಟೈಸರ್  ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ಸಮರೋಪಾದಿಯಲ್ಲಿ ಪೂರೈಸಲು ಅಗತ್ಯ ಕ್ರಮ  ವಹಿಸಬೇಕು ಇದರಿಂದ ನ್ಯಾಯಯುತ ಬೆಲೆಗೆ ಸ್ಯಾನಿಟೈಸರ್ ಪೂರೈಕೆಯಾಗುತ್ತವೆ. ಇನ್ನೊಂದು  ಸಮಸ್ಸೆಯನ್ನು ನಾವು ಅಂದಾಜು ಮಾಡಿಲ್ಲ ಎಂದು ಭಾವಿಸುತ್ತೇನೆ. ಈಗ ಜೀವರಕ್ಷಕ ಔಷಧಿಗಳ  ಪೂರೈಕೆ ಕೇವಲ ಅಲ್ಲಲ್ಲಿ ನಡೆಯುತ್ತಿದೆ. ಫಾರ್ಮಾಸೂಟಿಕಲ್ ಕಂಪನಿಗಳಿಂದ ವಿತರಕರಿಗೆ  ಔಷಧಿಗಳು ಪೂರೈಕೆ ಯಾಗಬೇಕಾಗಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಿಗೆ  ಹಾಗೂ ರಾಜ್ಯದ ಇತರ ಭಾಗಗಳಿಗೆ  ದೇಶದ ನಾನಾ ಭಾಗಗಳಿಂದ ಈ ಔಷಧಿಗಳು ಪೂರೈಕೆಯಾಗ ಬೇಕಾಗಿದೆ. ಇದಕ್ಕೆ ಸಮರ್ಪಕವಾದ ಸಾರಿಗೆ  ವ್ಯವಸ್ಥೆ ಎಂದಿನಂತೆ ಇಲ್ಲ. ವಿತರಕರು ಬುಕ್ ಮಾಡಿದ ಸರಕುಗಳು ಪೂರೈಕೆಯಾಗುವಲ್ಲಿ  ಅನಗತ್ಯ ವಿಳಂಬವಾಗುತ್ತಿದೆ. ಎಲ್ಲಾ ಊರುಗಳ ವಿತರಕರಿಗೆ ಫಾರ್ಮಾಸೂಟಿಕಲ್ ಕಂಪನಿಗಳಿಂದ  ಔಷಧಿಗಳು ವಿತರಣೆಯಾಗುವಂತೆ ಅದಕ್ಕಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸೂಕ್ತವಾದ  ಆದೇಶ ಮತ್ತು ವ್ಯವಸ್ಥೆ ಸರ್ಕಾರದ ಕಡೆಯಿಂದ ಕೈಗೊಳ್ಳಲೇಬೇಕು. ಇಲ್ಲದಿದ್ದರೆ ಕೋವಿಡ್-19  ಮಹಾಮಾರಿಯಿಂದ ಪೀಡಿತರಾಗುವುದಕ್ಕಿಂತ ಹೆಚ್ಚು ಜನ ಜೀವರಕ್ಷಕ ಔಷಧಿಗಳ ಕೊರತೆಯಿಂದ  ಸಂಕಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ

.ಎಲ್ಲಾ  ಜಿಲ್ಲೆಗಳಲ್ಲೂ ಸಮಾನವಾದಂತಹ ಮೂಲಭೂತ ಪರಿಕರಗಳ ವ್ಯವಸ್ಥೆ ಕೈಗೊಳ್ಳುವುದು ಸರ್ಕಾರದ  ಪ್ರಾಥಮಿಕ ಜವಾಬ್ದಾರಿ ಇಂಥ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳ Ego ಅಥವಾ ನಾನು ಮೇಲು  ನೀನು ಮೇಲು ಎಂಬ ವಿಷಯಗಳಿಗೆ ಇದು ಸಕಾಲವಲ್ಲ. ಎಲ್ಲರೂ ಯೋಧರಂತೆ ಕಾರ್ಯನಿರ್ವಹಿಸಬೇಕು.  ರಾಜ್ಯದ ಪ್ರಮುಖ ವೈದ್ಯಕೀಯ ಸೇವೆಗಳಲ್ಲಿ ಸೇವೆ ಸಲ್ಲಿಸಿದ್ದ ಗಣ್ಯರನ್ನು ಮತ್ತು  ನಿಪುಣರನ್ನು ಸರ್ಕಾರ ತನ್ನ ಸಲಹಾತ್ಮಕ ಪರಿಷತ್ನ್ನು ರಚಿಸಿ ನಿತ್ಯವೂ ಈ ಪರಿಷತ್  ಸದಸ್ಯರು ಸಭೆ ಸೇರಿ ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡುವಂತೆ ತನ್ಮೂಲಕ ಸಮಗ್ರವಾದ  ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುವೆ.ಬೆಂಗಳೂರು,  ಮಂಗಳೂರು, ದಾವಣಗೆರೆ ಯಂತಹ ದೊಡ್ಡ ನಗರಗಳಲ್ಲಿ ಪೊಲೀಸರು ಇತರ ಅಧಿಕಾರಿಗಳು ಹಾಗೂ  ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಗೊಂದಲ ಸೃಷ್ಟಿಮಾಡಿವೆ. ನಿರ್ಣಯ ಮಾಡುವವರ ನಿರ್ಣಯಕ್ಕೆ  ಅಡ್ಡಿಯಾಗುವ ವಾತಾವರಣ ಇಲ್ಲಿ ಮನೆಮಾಡಿದೆ. ಈ ಕುರಿತು ಹಲವು ವಾಹಿನಿಗಳಲ್ಲಿ ಪ್ರಸಾರವಾಗಿರುವ ವರದಿಗಳು ಇದನ್ನೆಲ್ಲ ಸ್ಪಷ್ಟಪಡಿಸುತ್ತವೆ. ಇಂಥ ಘಟನೆಗಳು ಈ  ಸಂದರ್ಭದಲ್ಲಿ ಭಾರಿ ಹಾನಿಗೆ ಕಾರಣವಾಗುವವು. ಅಂತಹದ್ದಾಗದಂತೆ ಮುತುವರ್ಜಿ ವಹಿಸಲು  ಕೋರುತ್ತೇನೆ ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಎಚ್.ಕೆ.ಪಾಟೀಲ್ ಮನವಿ ಮಾಡಿದ್ದಾರೆ.