ಅನುಭವಿ ಬ್ಯಾಟ್ಸ್ಮನ್ ಹಾಶೀಮ್ ಆಮ್ಲಾ ಕ್ರಿಕೆಟ್ಗೆ ಗುಡ್ಬೈ

ಕೇಪ್ಟೌನ್, ಆ 9     ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್ಮನ್ ಹಾಶೀಮ್  ಆಮ್ಲಾ ಅವರು ತಮ್ಮ 15 ವರ್ಷಗಳ ಸುದೀರ್ಘಾವಧಿಯ ವೃತ್ತಿ ಬದುಕಿಗೆ ಗುರುವಾರ ಹಠಾತ್ತನೆ ತೆರೆ  ಎಳೆದಿದ್ದು, ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.  

 36 ವರ್ಷದ ಅನುಭವಿ ಬಲಗೈ ಬ್ಯಾಟ್ಸ್ಮನ್ ಆಮ್ಲಾ, ದಕ್ಷಿಣ ಆಫ್ರಿಕಾ ಪರ ಎಲ್ಲಾ ಮಾದರಿಯ  ಕ್ರಿಕೆಟ್ನಲ್ಲಿ ಒಟ್ಟು 349 ಪಂದ್ಯಗಳನ್ನಾಡಿದ್ದು 18,672 ರನ್ಗಳನ್ನು  ಗಳಿಸಿದ್ದಾರೆ. ಇದರಲ್ಲಿ 55 ಶತಕಗಳು ಮತ್ತು 88 ಅರ್ಧಶತಕಗಳು ಸೇರಿವೆ. ಇನ್ನು ಟೆಸ್ಟ್  ಕ್ರಿಕೆಟ್ನಲ್ಲಿ ಹರಿಣ ಪಡೆಯ ಪರ ತ್ರಿಶತಕ ದಾಖಲಿಸಿದ ಏಕೈಕ ಬ್ಯಾಟ್ಸ್ಮನ್ ಎಂಬ  ಹೆಗ್ಗಳಿಕೆ ಅವರದ್ದು. 

ಮೊದಲಿಗೆ ದಕ್ಷಿಣ ಆಫ್ರಿಕಾ ತಂಡದ ಜೊತೆಗೆ ಇಂಥದ್ದೊಂದು ಅದ್ಭುತ ಪಯಣದಲ್ಲಿ  ಸಾಗಿಬರಲು ನೆರವಾದ ದೇವರಿಗೆ ಧನ್ಯವಾದಗಳು. ಈ ಪಯಣದಲ್ಲಿ ಹಲವು ಅದ್ಭುತ ಪಾಠಗಳನ್ನು  ಕಲಿತಿದ್ದೇನೆ. ಹಲವು ಸ್ನೇಹಿತರನ್ನು ಸಂಪಾದಿಸಿದ್ದೇನೆ. ಪ್ರೊಟೀಯಾಸ್ ತಂಡದ ಬಾಂಧವ್ಯ  ಅನುಭವಿಸಿದ್ದೇನೆ," ಎಂದು ಆಮ್ಲಾ ಬಿಡುಗಡೆ ಮಾಡಿರುವ ತಮ್ಮ ಹೇಳಿಕೆಯಲ್ಲಿ  ತಿಳಿಸಿದ್ದಾರೆ.  

ಇನ್ನು ಏಕದಿನ ಕ್ರಿಕೆಟ್ನಲ್ಲೂ ಹಲವು ದಾಖಲೆಗಳನ್ನು ಬರೆದಿರುವ ಆಮ್ಲಾ, 2000, 3000,  4000, 5000, 6000 ಮತ್ತು 7000 ಏಕದಿನ ಕ್ರಿಕೆಟ್ ರನ್ಗಳನ್ನು ಅತ್ಯಂತ ವೇಗವಾಗಿ  ಪೂರೈಸಿದ ವಿಶ್ವ ದಾಖಲೆ ಹೊಂದಿದ್ದಾರೆ.  

 "ನನ್ನ ಪೋಷಕರ ಪ್ರರ್ಥನೆ, ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ಹೇಳಬಯಸುತ್ತೇನೆ. ಅವರ  ನೆರಳಿನಿಂದಲೇ ನಾನು ದಕ್ಷಿಣ ಆಫ್ರಿಕಾ ತಂಡದ ಪರ ಇಷ್ಟು ವರ್ಷ ಆಡಲು ಸಾಧ್ಯವಾಯಿತು.  ನನ್ನ ಕುಟುಂಬ, ನನ್ನ ಸ್ನೇಹಿತರು, ನನ್ನ ಏಜೆಂಟ್, ನನ್ನ ತಂಡದ ಸಹ ಆಟಗಾರರು ಎಲ್ಲರಿಗೂ  ಧನ್ಯವಾದ. ಈ ಪಯಣದಲ್ಲಿ ಇವರೆಲ್ಲರ ಪಾತ್ರ ಅದ್ಭುತವಾದದ್ದು. ಅದರಲ್ಲೂ ನನ್ನೆಲ್ಲಾ  ಯಶಸ್ಸಿನ ಹಿಂದೆ ನಿಂತು ಸಂಭ್ರಮಿಸಿದ ಅಭಿಮಾನಿಗಳಿಗೆ ಧನ್ಯವಾದಗಳು. ಸಿಯಾಬೊಂಗಾ ಸೌತ್  ಆಫ್ರಿಕಾ," ಎಂದು ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. 

  "ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೂ ವಿಶೇಷ ಧನ್ಯವಾದಗಳನ್ನು ಹೇಳುತ್ತೇನೆ.  ವಿಶೇಷವಾಗಿ ಸಿಇಒ ಮಿ. ಥಬಾಂಗ್ ಮೊರೊಯ್ ಮತ್ತು ಅವರ ಆಡಳಿತ ತಂಡಕ್ಕೆ. ನನಗೆ ಸಿಕ್ಕ  ಎಲ್ಲಾ ಅವಕಾಶಗಳನ್ನು ಪ್ರಸಂಶಿಸುತ್ತೇನೆ," ಎಂದು ಆಮ್ಲಾ ಹೇಳಿದ್ದಾರೆ. 

ಟೆಸ್ಟ್ ಕ್ರಿಕೆಟ್ ಸಾಧನೆ 

  124 ಪಂದ್ಯ  


9282 ರನ್  


 311* ಗರಿಷ್ಠ  


 46.64 ಸರಾಸರಿ  


 49.97 ಸ್ಟ್ರೈಕ್ರೇಟ್  


 28 ಶತಕ 

  41 ಅರ್ಧಶತಕ 


ಏಕದಿನ ಕ್ರಿಕೆಟ್ ಸಾಧನೆ  


 181 ಪಂದ್ಯ  


8113 ರನ್  


159 ಗರಿಷ್ಠ  


49.46 ಸರಾಸರಿ  


88.39 ಸ್ಟ್ರೈಕ್ರೇಟ್  


27 ಶತಕ  


39 ಅರ್ಧಶತಕ 


ಅಂತಾರಾಷ್ಟ್ರೀಯ ಟಿ20 

  44 ಪಂದ್ಯ  


1277 ರನ್  


97* ಗರಿಷ್ಠ  


 33.60 ಸರಾಸರಿ  


132.05 ಸ್ಟ್ರೈಕ್ ರೇಟ್  


 08 ಅರ್ಧಶತಕ