ಶಿಕ್ಷಣದ ಜತೆ ಉತ್ತಮ ಸಂಸ್ಕಾರ ಮುಖ್ಯ: ಅಮೃತಾನಂದಶ್ರೀ
ದೇವರಹಿಪ್ಪರಗಿ 07: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರವನ್ನು ಕಲಿತುಕೊಳ್ಳಬೇಕು ಆಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ಬಾಲಗಾವಿ ಗುರುದೇವ ಆಶ್ರಮದ ಅಮೃತಾನಂದ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಶುಕ್ರವಾರದಂದು ನಡೆದ ವೆಂಕಟೇಶ್ವರ ದೇವಸ್ಥಾನದ ದ್ವಿತೀಯ ವರ್ಷದ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಈ ಭಾಗದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಆಧ್ಯಾತ್ಮದ ಶಕ್ತಿ ಕೇಂದ್ರವಾದ ಮಂದಿರವಿದೆ. ಪ್ರತಿದಿನ ವಿದ್ಯಾರ್ಥಿಗಳು ಕೆಲ ಕಾಲ ಜ್ಞಾನ ಮಾಡುವ ಮೂಲಕ ಆತ್ಮಸ್ಥೈರ್ಯದ ಜೊತೆ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ವಿದ್ಯಾರ್ಥಿಗಳು ಉನ್ನತ ಕನಸು ಹೊಂದುವ ಜೊತೆಗೆ ಕನಸಿನ ಶ್ರಮದ ಅಭ್ಯಾಸ ನಡೆಸಬೇಕು. ಈ ಭಾಗದ ಗ್ರಾಮೀಣ ಪ್ರದೇಶದ ಮಕ್ಕಳು ಸಂಸ್ಥೆಯಲ್ಲಿ ಕಲೆತು ಉತ್ತಮ ಶಿಕ್ಷಣ ಪಡೆದು ಪ್ರತಿಭಾವಂತರಾಗಬೇಕು. ಬರೀ ಅಂಕ ಆಧಾರಿತ ಶಿಕ್ಷಣಕ್ಕಿಂತ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ನೀಡುವ ಶಿಕ್ಷಣ ಸಂಸ್ಥೆಯ ಮುಖ್ಯ ಧ್ಯೇಯವಾಗ ಬೇಕು ಎಂದು ಜಾತ್ರಾ ಮಹೋತ್ಸವಕ್ಕೆ ಶುಭ ಹಾರೈಸಿದರು.ದಿವ್ಯ ಸಾನಿಧ್ಯವನ್ನು ತಿಂಥಣಿಯ ವೀರಗೋಟದ ಅಡವಿಲಿಂಗ ಮಹಾರಾಜರು, ತಳೆವಾಡದ ಅಭಿನವ ಸಿದ್ದರತ್ನ ಮದಗೊಂಡೇಶ್ವರ ಮಹಾರಾಜರು ಮಾತನಾಡಿ, ಜಾತ್ರೆಗಳಿಗೆ ಯಾವುದೇ ಜಾತಿ ಧರ್ಮದ ಲೇಪವಿರುವುದಿಲ್ಲ ಎಲ್ಲಾ ಧರ್ಮೀಯರು ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ. ಸಂಸ್ಥೆಯ ಅಧ್ಯಕ್ಷರು ಈ ಭಾಗದಲ್ಲಿ ಹಲವಾರು ಸಂಸ್ಥೆಗಳನ್ನು ಹುಟ್ಟು ಹಾಕಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವುದು ಒಳ್ಳೆ ಕಾರ್ಯವಾಗಿದೆ ಹಾಗೂ ವಿದ್ಯಾರ್ಥಿಗಳಿಗೆ ಆಧ್ಯಾತ್ಮದ ಕುರಿತು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ವೆಂಕಟೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಎಲ್.ಆರ್.ಅಂಗಡಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ನಿವೃತ್ತ ಪ್ರಾಧ್ಯಾಪಕ ಎಸ್.ಎನ್.ಬಸವರಡ್ಡಿ ಅವರು ಮಾತನಾಡಿ, ಸಂಸ್ಥೆ ಗ್ರಾಮೀಣ ಭಾಗದಲ್ಲಿ ಇದ್ದರು ಆಧ್ಯಾತ್ಮದ ಜೊತೆ ಒಳ್ಳೆಯ ಶಿಕ್ಷಣವನ್ನು ನೀಡಲಾಗುತ್ತಿದ್ದು ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ ಹಾಗೂ ಈ ಭಾಗದ ತಿರುಮಲ ಎಂದೆ ಪ್ರಸಿದ್ಧಿ ಹೊಂದಿರುವ ವೆಂಕಟೇಶ್ವರ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಶುಭವಾಗಲಿ ಎಂದು ಹೇಳಿದರು.
ಸಂಸ್ಥೆಯಲ್ಲಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಿದ್ದು ವಿಶೇಷವಾಗಿತ್ತು. ಮುಖಂಡರಾದ ಸುರೇಶ ಪ್ಯಾಟಿ, ಶಶಿಧರ ಕುಮಟಗಿ, ಶಿಕ್ಷಕರುಗಳಾದ ಪಿ.ಕೆ.ನಾಯಕ, ಎಂ.ಜಿ.ಸಜ್ಜನ, ಎನ್.ಎಲ್.ಅಂಗಡಿ, ಆರ್.ಯು.ಜಾಧವ, ಎಂ.ಎಸ್.ಕೋಳಿ ಸೇರಿದಂತೆ ದೇವೂರ ಹಾಗೂ ಮಣ್ಣೂರ ಗ್ರಾಮದ ಪ್ರಮುಖರು, ಗಣ್ಯರು, ಗ್ರಾಪಂ ಸರ್ವ ಸದಸ್ಯರು, ದೇವಸ್ಥಾನದ ಸೇವಾ ಸಮಿತಿಯ ಸದಸ್ಯರು, ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಎಸ್.ಎಸ್.ತಳವಾರ ನಿರೂಪಿಸಿ, ವಂದಿಸಿದರು.