ವುಹಾನ್, ಅ24: ಚೀನಾದಲ್ಲಿ ನಡೆಯುತ್ತಿರುವ ಏಳನೇ ಸಿಐಎಸ್ಎಂ ಮಿಲಿಟರಿ ವಿಶ್ವ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಶಿವಪಾಲ್ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಶೂಟಿಂಗ್ ವಿಭಾಗದಲ್ಲಿ ಗುರುಪ್ರೀತ್ ಸಿಂಗ್ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.
ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿವಪಾಲ್ ಸಿಂಗ್, ಜಾವೆಲಿನ್ ಅನ್ನು 83.33 ಮೀ ಎಸೆಯುವ ಮೂಲಕ ಸ್ವರ್ಣ ಪದಕ ಭಾರತಕ್ಕೆ ತಂದುಕೊಟ್ಟರು. 2019ರ ಏಷ್ಯನ್ ಕ್ರೀಡಾಕೂಟದಲ್ಲೂ ಶಿವಪಾಲ್ ಜಾವೆಲಿನ್ 86.23 ಮೀ ಎಸೆದು ಬೆಳ್ಳಿ ಪದಕ ಗೆದ್ದಿದ್ದರು.
ಗುರುಪ್ರೀತ್ ಸಿಂಗ್ ಸದ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪುರುಷರ 25ಮೀ. ಸೆಂಟರ್ ಫೈರ್ ಪಿಸ್ತೂಲ್ ವಿಭಾಗದಲ್ಲಿ 585 ಅಂಕಗಳನ್ನು ಸಂಪಾಧಿಸುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
2010ರಲ್ಲಿ ಭಾರತದಲ್ಲಿ ನಡೆದಿದ್ದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಗುರುಪ್ರೀತ್ ಸಿಂಗ್ ಅವರು ಎರಡು ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದರು.
ಗುರುವಾರ ಅನೀಶ್ ಪಿಲ್ಲೈ (ಪುರುಷರ ವಿಶೇಷ ಚೇತನರ 200ಮೀ. ಐಎಫ್1), ವೀರೆಂದರ್ (ಪುರುಷರ ವಿಶೇಷ ಚೇತನರ ಶಾಟ್ಪುಟ್ ಐಎಫ್5) ಹಾಗೂ ಆನಂದನ್ ಗುಣಶೇಖರನ್ (ಪುರುಷರ ವಿಶೇಷ ಚೇತನರ 200 ಮೀ. ಐಟಿ1) ಅವರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದರು.