ನವದೆಹಲಿ, ಜ 28 ಇಂದು ನಿವೃತ್ತಿಯಾಗುತ್ತಿರುವ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರಿಗೆ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಶುಭ ಕೋರಿದ್ದಾರೆ. ‘ಇಂದು ನಿವೃತ್ತಿಯಾಗುತ್ತಿರುವ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ಸಚಿವಾಲಯದ ನಾಯಕತ್ವ ಮತ್ತು ಭಾರತೀಯ ರಾಜತಾಂತ್ರಿಕತೆಗೆ ಗೋಖಲೆ ನೀಡಿದ ಅನೇಕ ಕೊಡುಗೆಗಳಿಗಾಗಿ ಅವರಿಗೆ ಧನ್ಯವಾದಗಳು. ಅವರ ಮುಂದಿನ ಪ್ರಯತ್ನಗಳಿಗಾಗಿ ಶುಭ ಹಾರೈಸುತ್ತಿದ್ದೇನೆ’ ಎಂದು ಡಾ.ಜೈಶಂಕರ್ ಟ್ವೀಟ್ ಮಾಡಿದ್ದಾರೆ.ವಿಶೇಷವೆಂದರೆ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಡಾ. ಜೈಶಂಕರ್ ಅವರಿಗೆ ವಿಜಯ್ ಗೋಖಲೆ ಅವರು ಉತ್ತರಾಧಿಕಾರಿಯಾಗಿದ್ದರು. ಡಾ.ಜೈಶಂಕರ್ ಅವರು 2016ರ ಜ 28 ಮತ್ತು 2018ರ ಜ 28 ರ ನಡುವೆ ವಿದೇಶಾಂಗ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದರು. ಕಳೆದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸಚಿವ ಸಂಪುಟಕ್ಕೆ ಸೇರಿದ ಜೈಶಂಕರ್ ಅವರು, ನಟ್ವರ್ ಸಿಂಗ್ ನಂತರ ವಿದೇಶಾಂಗ ವ್ಯವಹಾರಗಳ ಸಚಿವರಾದ ಎರಡನೇ ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದಾರೆ.