ಗಾಂಧಿನಗರ, ಡಿ 11: 2002ರಲ್ಲಿ ನಡೆದಿದ್ದ ಗೋದ್ರಾ ರೈಲು ಬೆಂಕಿ ಮತ್ತು ನಂತರದ ಗಲಭೆಗಳಲ್ಲಿ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆಗಳಿಗೆ ಸಂಬಂಧಿಸಿದ ಎರಡನೇ ಹಾಗೂ ಅಂತಿಮ ತನಿಖಾ ವರದಿಯನ್ನು ಗುಜರಾತ್ ಸರ್ಕಾರ ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದೆ.
ಈ ಪ್ರಕರಣಗಳಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಮತ್ತು ಈಗಿನ ಪ್ರಧಾನಿ ನರೇಂದ್ರಮೋದಿ, ಮೋದಿ ಸರ್ಕಾರದಲ್ಲಿದ್ದ ಗೃಹ ಸಚಿವ ಹರೇನ್ ಪಾಂಡ್ಯ ಮತ್ತು ಇತರ ಇಬ್ಬರು ಸಚಿವರನ್ನು ನ್ಯಾಯಮೂರ್ತಿ ನಾನಾವತಿ ನೇತೃತ್ವದ ತನಿಖಾ ಆಯೋಗ ದೋಷಮುಕ್ತಗೊಳಿಸಿ ವರದಿ ನೀಡಿತ್ತು.
ಗುಜರಾತ್ ಗಲಭೆಗಳು ಸಂಘಟಿತವಲ್ಲ ಎಂದು ವರದಿ ಸ್ಪಷ್ಟವಾಗಿ ಹೇಳಿದೆ. ಗಲಭೆಕೋರರನ್ನು ತಡೆಯುವಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ ಎಂದು ಮಾಜಿ ಐಪಿಎಸ್ ಅಧಿಕಾರಿಗಳಾದ ಶ್ರೀಕುಮಾರ್, ರಾಹುಲ್ ಶರ್ಮಾ ಮತ್ತು ಮಹೇಶ್ ಭಟ್ ಮಾಡಿದ್ದ ಆಪಾದನೆಗಳನ್ನು ವರದಿ ತಿರಸ್ಕರಿಸಿದೆ. ಸಂಜೀವ್ ಭಟ್ ಅವರು ನಂತರ ಸೇವೆಯಿಂದ ವಜಾ ಆಗಿ, ಕಸ್ಟಡಿ ಸಾವು ಮತ್ತು ಮಾದಕ ವಸ್ತು ಸಂಬಂಧಿತ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.
ಗಲಭೆಗಳನ್ನು ತಡೆಯುವಲ್ಲಿ ಕೆಲ ಕಡೆ ಪೊಲೀಸರು ವಿಫಲವಾಗಿದ್ದರೂ ಹಿಂಸಾಚಾರ ಸಂಘಟಿತವಲ್ಲ ಎಂದು ವರದಿ ಹೇಳಿದೆ. ಗಲಭೆಕೋರರಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಹೊತ್ತಿದ್ದ ಅಂದಿನ ರಾಜ್ಯ ಸಚಿವರಾಗಿದ್ದ ಭರತ್ ಬರೋಟ್ ಮತ್ತು ಅಶೋಕ್ ಭಟ್ ಅವರನ್ನೂ ದೋಷಮುಕ್ತಗೊಳಿಸಲಾಗಿದೆ.