15 ದಿನಗಳಲ್ಲಿ ಸಂಪೂರ್ಣ ವರದಿ ನೀಡಿ: ಮೂರ್ತಿ

ಕೊಪ್ಪಳ 01: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಚೆಕ್ ಡ್ಯಾಂಗಳ ಕುರಿತು ಜಿಲ್ಲಾ ಗುಣ ನಿಯಂತ್ರಣ ತಂಡದವರಿಂದ ಕೈಗೊಂಡ ತನಿಖೆ ಕಾರ್ಯವನ್ನು ಪೂರ್ಣಗೊಳಿಸಿ ಇನ್ನು 15 ದಿನಗಳಲ್ಲಿ ಸಂಪೂರ್ಣ ವರದಿ ನೀಡಬೇಕು ಎಂದು ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ  ಹೇಳಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಗುಣ ನಿಯಂತ್ರಣ ತಂಡವದರೊಂದಿಗೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 635 ಚೆಕ್ ಡ್ಯಾಂಗಳಲ್ಲಿ 338 ಚೆಕ್ ಡ್ಯಾಂಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಗುಣ ನಿಯಂತ್ರಣ ತಂಡದವರಿಂದ ತನಿಖೆ ಕಾರ್ಯ ಮುಗಿದಿದೆ. ಇನ್ನೂ 297 ಚೆಕ್ ಡ್ಯಾಂಗಳ ತನಿಖೆ ಬಾಕಿ ಇದ್ದು, 15 ದಿನದೊಳಗೆ ಎಲ್ಲ ಚೆಕ್ ಡ್ಯಾಂಗಳ ತನಿಖೆಯನ್ನು ಪೂರ್ಣಗೊಳಿಸಿ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತನ ಉಪ ಕಾರ್ಯದರ್ಶಿ  ಎನ್.ಕೆ. ತೊರವಿ ಸೇರಿದಂತೆ ಜಿಲ್ಲಾ ಗುಣ ನಿಯಂತ್ರಣ ತಂಡದ ಅಧಿಕಾರಿಗಳು ಉಪಸ್ಥಿತರಿದ್ದರು.