ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ರೈತನಾಗುವ ಕನಸು ಬಿತ್ತಿರಿ : ಕುಲಕರ್ಣಿ
ಶಿಗ್ಗಾವಿ 05: ನಾಡಿನಲ್ಲಿ 36 ಲಕ್ಷ ಬಿಇ ಓದಿದ ನಿರುದ್ಯೋಗಿಗಳಿದ್ದಾರೆ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ರೈತನಾಗುವ ಕನಸು ಬಿತ್ತಿರಿ. ದೇಶಕ್ಕೆ ಅನ್ನ ನೀಡುವ ಕಾಯಕ ಶ್ರೇಷ್ಠವಾಗಿದೆ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದರು. ಪಟ್ಟಣದಲ್ಲಿ ಮೈಲಾರಲಿಂಗೇಶ್ವರ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಧರ್ಮಸಭೆಯಲ್ಲಿ ಮಾತನಾಡಿದ ಅವರು ಭಾರತ ದೇಶ ಕೃಷಿ ಪ್ರಧಾನವಾಗಿದ್ದು, ಆಧುನಿಕ ಭರದಲ್ಲಿ ನೌಕರಿಗೆ, ಉದ್ಯೋಗಕ್ಕೆ ಆದ್ಯತೆ ನೀಡುವುದು ಸರಿಯಲ್ಲ. ದೇಶಕ್ಕೆ ಅನ್ನ ನೀಡುವ ರೈತರಿಗೆ ಹೆಣ್ಣು ಹೆತ್ತವರು ಕನ್ಯಾ ನೀಡಿರಿ. ಭವಿಷ್ಯದಲ್ಲಿ ಸಮಾಜ ಇನ್ನಷ್ಟು ಸಮೃದ್ಧಿ ಹೊಂದಲಿದೆ' ಎಂದರು. ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, 'ದೇವಾಲಯಗಳನ್ನ ಕಟ್ಟಬಹುದು. ಆದರೆ ಮನಸ್ಸುಗಳನ್ನು ಕಟ್ಟುವು ಕೆಲಸ ನಮ್ಮದಾಗಬೇಕು ಎಂದರು.
ತಾಲೂಕ ಶಿಕ್ಷಣ ಸಮಿತಿ ಉಪಾಧ್ಯಕ್ಷ ದತ್ತಣ್ಣ ವೇರ್ಣೇಕರ ಮಾತನಾಡಿದರು. ಕೆರೂರ ಚರಂತಿಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ರಮೇಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಸದಸ್ಯ ನಿಂಗಪ್ಪ ಯಲಿಗಾರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ರಮೇಶ ವನಹಳ್ಳಿ, ಮುಸ್ತಾಕ ತಹಶೀಲ್ದಾರ್, ಸುಲೇಮಾನಬಾಷಾ ತರ್ಲಘಟ್ಟ,ಮಂಜುನಾಥ ಮಣ್ಣಣ್ಣವರ, ಲಿಂಗರಾಜ ಕುನ್ನೂರ, ಮಾಲತೇಶ ಯಾಲಿಗಾರ, ಪರಶುರಾಮ ಕುದರಿ, ಡಾಂಬಲಪ್ಪ ರಾಠೋಡ, ಮಂಜಪ್ಪ ಧಾರವಾಡ, ಶಶಿಧರ ಸುರಗೀಮಠ, ಶಿವಾನಂದ ಬಾಗೂರ, ವಿರೇಶ ಸೊಬರದ, ವಿಜಯಕುಮಾರ ಗೊಡಚಿ, ಮಾಲತೇಶ ಮೊರಬದ, ಸುರೇಶ ಯಲಿಗಾರ ಸೇರಿದಂತೆ ದೇವಸ್ಥಾನ ಸೇವಾ ಸಮಿತಿ ಸದಸ್ಯರು ಇದ್ದರು. ಗದುಗಿನ ಗಾನಯೋಗಿ ಪುಟ್ಟರಾಜ ಕವಿಗವಾಯಿಗಳ ಶಿಷ್ಯ ಪ್ರಭಯ್ಯಶಾಸ್ತ್ರಿ ಹಿರೇಮಠ ಪ್ರವಚನ ಮತ್ತು ಶಿವಾನಂದ ಮುಂದೇವಾಲ, ಬಸವರಾಜ ಚಳಗೇರಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ವಿವಿಧ ಸಾಧಕರನ್ನು ಹಾಗೂ ಸೇವಾಧಾರಿಗಳನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ನಂತರ ನಟರಾಜ ನಾಟ್ಯ ಕಲಾ ಸಂಸ್ಥೆ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು.