ಕೊಪ್ಪಳ 27: ಜಿಲ್ಲೆಯಲ್ಲಿ ಗಂಟಲುಮಾರಿ ರೋಗ ನಿಯಂತ್ರಣಕ್ಕಾಗಿ ಡಿಸೆಂಬರ್ 11 ರಿಂದ 31 ರವರೆಗೆ ಶಾಲಾ ಲಸಿಕಾ ಅಭಿಯಾನ ನಡೆಯಲಿದೆ. ಜಿಲ್ಲೆಯಾದ್ಯಂತ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಪಾಲಕರಿಗೆ ಈ ಕುರಿತು ತಿಳುವಳಿಕೆ ನೀಡಿ ಮಕ್ಕಳಿಗೆ ಲಸಿಕೆ ನೀಡಿ, ಗಂಟಲುಮಾರಿ ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗಂಟಲುಮಾರಿ ರೋಗದ ಶಾಲಾ ಲಸಿಕಾ ಅಭಿಯಾನ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕುವಾಗ ಸಹಜ ಗೊಂದಲಗಳು ಪಾಲಕರಲ್ಲಿ ಮೂಡುತ್ತವೆ. ಆದ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ವೈದ್ಯಾಧಿಕಾರಿಗಳು ಮಕ್ಕಳ ಪಾಲಕರಿಗೆ ಲಸಿಕೆಯ ಪ್ರಯೋಜನದ ಕುರಿತು ಸೂಕ್ತ ತಿಳುವಳಿಕೆ ನೀಡಬೇಕು. ಜಿಲ್ಲೆಯಲ್ಲಿ 49 ಸಂಶಯಾಸ್ಪದ ಪ್ರಕರಣಗಳು ಪತ್ತೆಯಾಗಿದ್ದು, ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಗಂಭೀರ ಪರಿಣಾಮ ಬೀರುತ್ತದೆ. ಈ ಕುರಿತು ಶಾಲೆಗಳಲ್ಲಿ ಲಸಿಕೆ ಹಾಕುವಾಗ ವೈದ್ಯಾಧಿಕಾರಿಗಳು ಖುದ್ದು ಉಪಸ್ಥಿತರಿರಬೇಕು. ಲಸಿಕಾ ಅಭಿಯಾನದ ಪ್ರಗತಿ ಕುರಿತು ಪ್ರತಿನಿತ್ಯದ ವರದಿಯನ್ನು ನೀಡಬೇಕು. ವೈದ್ಯಾಧಿಕಾರಿಗಳು ಈ ಕುರಿತಂತೆ ಪರಸ್ಪರ ಸಂಪರ್ಕದಲ್ಲಿರಬೇಕು. ಮುಖ್ಯವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗ ಮಹತ್ವವಾಗಿದೆ. ತಮ್ಮ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ನಿದರ್ೇಶನ ನೀಡಿ ಶಾಲಾ ಲಸಿಕಾ ಅಭಿಯಾನವು ಯಶಸ್ವಿಯಾಗಲು ಕ್ರಮ ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಿಗೆ ಸೂಚನೆ ನೀಡಿದರು. ಖಾಸಗಿ ಶಾಲೆಗಳಲ್ಲಿಯೂ ಮಕ್ಕಳಿಗೆ ಲಸಿಕೆ ಹಾಕಲು ಶಾಲಾ ಆಡಳಿತ ಮಂಡಳಿ ಅನುವು ಮಾಡಿಕೊಡಬೇಕು. ಈ ಕುರಿತು ಖಾಸಗಿ ಶಾಲೆಗಳ ಅಸೋಸಿಯೇಷನ್ ರವರು ತಮ್ಮ ಅಧೀನದ ಶಾಲೆಗಳಿಗೆ ಸೂಕ್ತ ನಿದರ್ೇಶನ ನೀಡಬೇಕು ಎಂದು ಅವರು ಸೂಚಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಲಸಿಕೆ ನೀಡುವಾಗ ಪಾಲಕರಲ್ಲಿ ಕೆಲ ಸಂಶಯಗಳು ಮೂಡುವುದು ಸಹಜ. ಅಂತಹ ಸಂದರ್ಭಗಳಲ್ಲಿ ವೈದ್ಯಾಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು, ಪಾಲಕರ ಮನವೊಲಿಸಬೇಕು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಲಸಿಕೆ ನೀಡುವಾಗ ಬಹಳ ಎಚ್ಚರ ವಹಿಸಿ ಎಂದು ಅವರು ಹೇಳಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ, ಡಾ. ಜಂಬಯ್ಯ, ಡಾ. ಮಹೇಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.