ವಾರಣಾಸಿ, ಸೆ 7: ಪ್ರಧಾನಿ ನರೇಂದ್ರ ಮೋದಿ ಈ ಬಾರಿ ತಮ್ಮ 69 ನೇ ಜನ್ಮದಿನವನ್ನು ಸಂಸದೀಯ ಕ್ಷೇತ್ರ ವಾರಣಾಸಿಯ 'ದಿವ್ಯಾಂಗ ಹಾಗೂ ಬಡ ಮಕ್ಕಳೊಂದಿಗೆ ಆಚರಿಸಲಿದ್ದು, ಈ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ಸಿದ್ಧತೆಗಳು ಆರಂಭಗೊಂಡಿವೆ
ಸೆ 17 ಅವರ ಜನ್ಮ ದಿನ. ಈ ಪ್ರಯುಕ್ತ ಸೆ 14 ರಿಂದ 20 ರವರೆಗೆ ವಿವಾಹ ನೋಂದಣಿಯಿಂದ ಹಿಡಿದು ಆರೋಗ್ಯ ತಪಾಸಣೆವರೆಗಿನ ಹಲವು ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ.
ಪ್ರಧಾನ ಮಂತ್ರಿ ಅವರ ಜನ್ಮ ದಿನದ ಶುಭ ಸಂದರ್ಭದಲ್ಲಿ ಬಿಜೆಪಿ ಸೆ 14 ರ ಶನಿವಾರ 'ವಿಶೇಷ ಸೇವಾ ಸಪ್ತಾಹ' ಆಚರಿಸಲಿದೆ ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವರೂ ಆಗಿರುವ ದತ್ತಿ, ಸಂಸ್ಕೃತಿ ವಿಭಾಗಗಳ ರಾಜ್ಯ ಸಚಿವ ಡಾ.ನೀಲಕಂಠ್ ತಿವಾರಿ ಹೇಳಿದ್ದಾರೆ.
ಸೆ 14 ರಿಂದ 20 ರವರೆಗೆ ರಾಜ್ಯದ ವಿವಿಧೆಡೆ ಆರೋಗ್ಯ ತಪಾಸಣೆ, ವಿವಾಹ ನೋಂದಣಿ ಸೇರಿಂದತೆ ಹಲವು ಜನೋಪಯೋಗಿ ಸೇವಾ ಶಿಬಿರಗಳನ್ನು ಆಯೋಜಿಸಲಾಗಿದೆ. ಸೆ 16 ರಂದು ಮಡಗಿನ್ ನಲ್ಲಿ ನಡೆಯಲಿರುವ ಆರೋಗ್ಯ ಶಿಬಿರದಲ್ಲಿ ವಿವಾಹ ನೋಂದಣಿಗೆ ವ್ಯವಸ್ಥೆ ಮಾಡಲಾಗುವುದು. ಆಸಕ್ತರು ಸಂಬಂಧಿತ ದಾಖಲೆಗಳೊಂದಿಗೆ ಶಿಬಿರದಲ್ಲಿ ಹೆಸರನ್ನು ನೋಂದಾಯಿಸಬಹುದಾಗಿದೆ. ನೋಂದಣಿಗಾಗಿ ಇಲಾಖೆಯ ಎಲ್ಲಾ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುತ್ತಾರೆ. ದಾಖಲೆಗಳ ಪರಿಶೀಲನೆ ಬಳಿಕ ನೋಂದಣಿ ಪತ್ರ ವಿತರಿಸಲಾಗುವುದು ಎಂದರು.
ವಿಶೇಷ ಸೇವಾ ಸಪ್ತಾಹದ ಮೊದಲ ದಿನ ಸೇವಾಪುರಿ ವಿಧಾನಸಭಾ ಕ್ಷೇತ್ರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ, ಎರಡನೇ ದಿನ ಕ್ಯಾಂಟ್ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರ, ಸೆ 16 ರಂದು ಮ್ಯಾದಗಿನ್ ನ ಟವನ್ ಹಾಲ್ ಮೈದಾನದಲ್ಲಿ ಎಲ್ಲಾ ವಯೋಮಾನದವರಿಗೆ ಬೃಹತ್ ಆರೋಗ್ಯ ತಪಾಸಣಾ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಇದೇ ಮೈದಾನದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ನಿವೇಶನ ಪ್ರಮಾಣ ಪತ್ರ ವಿತರಣೆ, ಪಡಿತರ ಚೀಟಿ ನೋಂದಣಿ ಮಾಡಿಕೊಡಲಾಗುವುದು. ಕನ್ಯಾ ಸಮಂಗಲ ಯೋಜನಾ, ಪೋಷಣ್ ಮಿಷನ್, ವಿಧವಾ ವೇತನ, ಉಜ್ವಲಾ ಯೋಜನಾ ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಭಿನ್ನ ಯೋಜನೆಗಳ ಕುರಿತು ಮಳಿಗೆ ಹಾಕಲಾಗುವುದು. ಮೋದಿ ಅವರ ಜನ್ಮದಿನದಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, 550 ದಾನಿಗಳಿಂದ ರಕ್ತ ಸಂಗ್ರಹಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಎಲ್ಲಾ ಶಿಬಿರಗಳನ್ನು ಯಶಸ್ವಿಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ರಕ್ತದಾನ ಶಿಬಿರಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗುವುದು ತಿವಾರಿ ತಿಳಿಸಿದರು.
ಸೆ 18 ರಂದು ರೋಹನಿಯಾ ವಿಧಾನಸಭಾ ಕ್ಷೇತ್ರದಲ್ಲಿ ಗೋ-ಸೇವಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇಲ್ಲಿ ಪಶುಗಳಿಗೆ ಲಸಿಕೆ, ಚಿಕಿತ್ಸೆ ನೀಡುವ ಜೊತೆಗೆ ನಿರಾಶ್ರಿತ ಹಸುಗಳನ್ನು ದತ್ತುಪಡೆಯುವ 60 ಜನರಿಗೆ ಸನ್ಮಾನ ಮಾಡಲಾಗುವುದು. ಸೆ 19 ರಂದು ಪಿಂಡರಾ ವಿಧಾನಸಭಾ ಕ್ಷೇತ್ರದಲ್ಲಿ ನಿರಾಶ್ರಿತ ಮಹಿಳೆಯರು ಹಾಗೂ ವಿಧವೆಯರ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗುವುದು. ಕೊನೆಯ ಸೆ 20 ರಂದು ಲಾಲ್ ಪುರದಲ್ಲಿನ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಹಸ್ತಕಲೆ ಸಭಾಂಗಣದಲ್ಲಿ ವಿಕಲಚೇತನರಿಗೆ ಆರೋಗ್ಯ ತಪಾಸಣೆ, ತ್ರಿಚಕ್ರವಾಹನ, ಕಿವಿ ಕೇಳುವ ಯಂತ್ರ ಸೇರಿದಂತೆ ಹಲವು ರೀತಿಯಲ್ಲಿ ನೆರವಾಗಬಲ್ಲ ಸಾಧನಗಳ ವಿತರಣೆ ಮಾಡಲಾಗುವುದು ಎಂದರು.