ಗದಗ 21: ಮಹಿಳೆಯರು ಸಾಕ್ಷರರಾದರೆ ಕುಟುಂಬದ ಭವಿಷ್ಯ ಉಜ್ವಲವಾಗುತ್ತದೆ ಎಂದು ಗದಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ನುಡಿದರು.
ಗಂಗಿಮಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿ.ಪಂ. ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಮಹಿಳೆಯರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗಾಗಿ ಇರುವ ಯೋಜನೆಗಳ ಸೌಲಭ್ಯಗಳು ಸದುಪಯೋಗವಾಗಬೇಕು. ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಕಾನೂನು ಬದ್ಧ ಹಕ್ಕು ಸಿಗುವಲ್ಲಿ ವಿಳಂಬವಾದರೆ ಅಥವಾ ಏನಾದರೂ ಸಮಸ್ಯೆಗಳಾದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅಜರ್ಿ ಕೊಟ್ಟು ಪರಿಹಾರ ಕಂಡುಕೊಳ್ಳಬೇಕು. ಮಹಿಳೆಯರು ಮನೆಯ ಒಳಗಡೆ ಮತ್ತು ಹೊರಗಡೆ ಮಾನಸಿಕ, ದೈಹಿಕ ಮತ್ತು ಆಥರ್ಿಕ ದೌರ್ಜನ್ಯಕ್ಕೊಳಗಾದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಕಾನೂನು ನೆರವು ಪಡೆಯಬಹುದಾಗಿದೆ ಎಂದು ಎಸ್.ಜಿ. ಸಲಗರೆ ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ವೈ.ಡಿ. ತಳವಾರ ಅವರು ಮಾತನಾಡಿ ಮಹಿಳೆಯರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಗದಿತ ಅವಧಿಯ ನಂತರ ಜನನ ಮತ್ತು ಮರಣ ಪ್ರಮಾಣ ಪತ್ರಗಳ ಪಡೆದುಕೊಳ್ಳಬೇಕಾದಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಅಜರ್ಿ ಸಲ್ಲಿಸಬಹುದಾಗಿದೆ ಎಂದರು.
ವಕೀಲರಾದ ಸುಮಾ ಬಿ ಶ್ರೀಗಿರಿ ಅವರು ಮಾತನಾಡಿ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಡಿ ಗದಗ ಜಿಲ್ಲೆಯು ರಾಷ್ಟ್ರೀಯ ಮಟ್ಟದಲ್ಲಿ ಎರಡು ಬಾರಿ ಪ್ರಶಸ್ತಿ ಪಡೆದಿದೆ. ಮಹಿಳೆಗೆ ಕೌಟುಂಬಿಕ ದೌರ್ಜನ್ಯ ಕಂಡು ಬಂದರೆ ಸಮೀಪದ ಸಿ.ಡಿ.ಪಿ.ಓ ಕಚೇರಿಯಲ್ಲಿ ಸಂರಕ್ಷಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆ ಕಾಯ್ದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಬಾಲ್ಯ ವಿವಾಹ ಮತ್ತು ವರದಕ್ಷಿಣೆ ತಡೆ ಕಾಯ್ದೆ , ಭಾಗ್ಯ ಲಕ್ಷ್ಮೀ ಯೋಜನೆ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಗದಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಿನೇಶ್ ಆರ್.ಎಂ, ಪೊಲೀಸ ಇಲಾಖೆಯ ಎ.ಎಸ್.ಐ. ರಾಮೇನಹಳ್ಳಿ, ಕಾರ್ಮಿಕ ನಿರೀಕ್ಷಕರಾದ ಎಸ್.ಎನ್. ಹಿರೇಹಾಳ, ವಕೀಲರು, ಗಂಗಿಮಡಿ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಮಹಿಳೆಯರು ಉಪಸ್ಥಿತರಿದ್ದರು. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕರಾದ ಶ್ರೀಧರ ಪೂಜಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.