ಅಪಘಾತವಾದಾಗ ಚಿತ್ರೀಕರಣ ಬಿಟ್ಟು ಸಹಾಯ ಮಾಡಿ: ಸಾರಿಗೆ ಇಲಾಖೆ ಆಯುಕ್ತರ ಕರೆ

ಬೆಂಗಳೂರು, ಜ 18  ಅಪಘಾತದ ಸಂದರ್ಭದಲ್ಲಿ ಸಾರ್ವಜನಿಕರು ಮೊಬೈಲ್‌ ನಲ್ಲಿ ಚಿತ್ರೀಕರಣ ಮಾಡುವುದನ್ನು ಬಿಟ್ಟು ಗಾಯಾಳುಗಳ ಪ್ರಾಥಮಿಕ ಚಿಕಿತ್ಸೆಯತ್ತ ಹೆಚ್ಚಿನ ಗಮನ ನೀಡಿದರೆ ಸಾವು ನೋವಿನ ಪ್ರಮಾಣ ಕಡಿಮೆ ಮಾಡಬಹುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಎನ್‌ ಶಿವಕುಮಾರ್‌ ಹೇಳಿದ್ದಾರೆ.ನಗರದ ಜ್ಞಾನಭಾರತಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿವರ್ಷ 4.70 ಲಕ್ಷ ಅಪಘಾತಗಳು ಸಂಭಸುತ್ತಿವೆ. ಈ ಅಪಘಾತಗಳಿಂದ ಸುಮಾರು ಒಂದುವರೆ ಲಕ್ಷದಷ್ಟು ಜನ ಸಾವನ್ನಪ್ಪುತ್ತಿರುವುದು ಕಳವಳಕಾರಿಯಾಗಿದೆ. ಬಹಳಷ್ಟು ಸಂಧರ್ಭಗಳಲ್ಲಿ ರಸ್ತೆ ಉಪಯೋಗಿಸುವವರ ನಿರ್ಲಕ್ಷದಿಂದ ಅಪಘಾತ ಸಂಭವಿಸುತ್ತದೆ. ಪಾದಚಾರಿಗಳು ಹಾಗೂ ಸೈಕಲ್‌ ಸವಾರರು ಹೆಚ್ಚಿನ ಪ್ರಮಾಣದಲ್ಲಿ ಅಪಘಾತಕ್ಕೀಡಾಗಿರುವುದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ ಎಂದರು. 

ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಅರಿವು ಜನರಲ್ಲಿ ಮೂಡಬೇಕು ಎನ್ನುವ ಉದ್ದೇಶದಿಂದ ಸಾರಿಗೆ ಇಲಾಖೆ ಈ ಸಪ್ತಾಹವನ್ನು ಆಯೋಜಿಸಿದೆ. ತಮಿಳುನಾಡಿನಲ್ಲಿ ಸಾವನ್ನಪ್ಪವವರ ಸಂಖ್ಯೆ ಹೆಚ್ಚಾಗಿತ್ತು. ಈ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ರಸ್ತೆ ಸುರಕ್ಷತೆ ಹಾಗೂ ಅಪಘಾತದ ನಂತದ ಗಾಯಾಳೂಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕೈಗೊಂಡ ತುರ್ತು ಚಿಕಿತ್ಸಾ ಕೇಂದ್ರಗಳಿಂದ ಉತ್ತಮ ಫಲಿತಾಂಶ ದೊರೆಯುತ್ತಿದೆ. ಸಾವನ್ನಪ್ಪುವವರ ಸಂಖ್ಯೆಯೂ ಕಡಿಮೆಯಾಗಿದೆ. ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ಬಹಳ ಅಮೂಲ್ಯ. ಈ ಸಮಯದ ಒಳಗಾಗಿ ಚಿಕಿತ್ಸೆ ದೊರೆಯುವಂತೆ ಮಾಡುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು. ಅಪಘಾತ ಆದ ಸಂಧರ್ಭವನ್ನು ಮೋಬೈಲ್‌ ನಲ್ಲಿ ಚಿತ್ರೀಕರಿಸುವುದನ್ನು ಬಿಟ್ಟು ಗಾಯಾಳುಗಳಿಗೆ ಅಗತ್ಯವಿರುವ ಪ್ರಾಥಮಿಕ ಚಿಕಿತ್ಸೆ ನೀಡುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.ಸಾರ್ವಜನಿಕರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರೆ ಅವರಿಗೆ ತೊಂದರೆ ಆಗದಂತೆ ಕಾನೂನನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ತಂದಿದೆ. ಗಾಯಾಳುಗಳಿಗೆ ನೆರವು ನೀಡುವವರು ಈ ಸಂಗತಿಯನ್ನು ಗಮನಿಸಬೇಕು ಎಂದರು. ಜ್ಞಾನಭಾರತಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ ಹೇಮಂತ ಕುಮಾರ್‌ ಮಾತನಾಡಿ, 31 ನೇ ರಾಷ್ಟ್ರಿಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆಯ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 400 ರಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದ್ದಾರೆ. ಅಲ್ಲದೆ ವಿ.ಆರ್‌.ಎಲ್‌ ಮತ್ತು ಬಿ.ಎಂ.ಟಿ.ಸಿ ಸಂಸ್ಥೆಗಳಲ್ಲಿ ವಾಹನ ಚಾಲಕರಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಇದೇ ವೇಳೆ ಸಂಚಾರಿ ನಿಯಮ ಕುರಿತ ಜಾಗೃತಿ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.