ಲಿಂಗಾನುಪಾತ ವ್ಯತ್ಯಯ- ವಾರದಲ್ಲಿ ಸರಿಪಡಿಸಲು ತಹಶೀಲ್ದಾರಗಳಿಗೆ ಸೂಚನೆ

ಹಾವೇರಿ 28: ಜಿಲ್ಲೆಯ ಕೆಲ ತಾಲೂಕುಗಳಲ್ಲಿ  ಪುರುಷ ಮತ್ತು ಮಹಿಳಾ ಮತದಾರರ ನೊಂದಣಿಯಲ್ಲಿ ವ್ಯತ್ಯಯವಾಗಿದೆ. ಲಿಂಗಾನುಪಾತದ ವ್ಯತ್ಯಯ ಕುರಿತಂತೆ ಬಿ.ಎಲ್.ಒ. ಜೊತೆಗೂಡಿ ಮಹಿಳಾ ಮತದಾರರು ಕಡಿಮೆ ನೊಂದಣಿಯಾಗಿರುವ ಮತಗಟ್ಟೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಒಂದು ವಾರದೊಳಗೆ ವ್ಯತ್ಯಯ ಸರಿಪಡಿಸುವಂತೆ ತಹಶೀಲ್ದಾರಗಳಿಗೆ ಭಾರತ ಚುನಾವಣಾ ಆಯೋಗದಿಂದ ನೇಮಕಗೊಂಡ ಮತದಾರರ ಪಟ್ಟಿ ವೀಕ್ಷಕರಾದ ರಾಜ್ಯ ಮುದ್ರಾಂಕ ಮತ್ತು ನೊಂದಣಿ ಇಲಾಖೆ ಆಯುಕ್ತರಾದ ಐ.ಎ.ಎಸ್.ಅಧಿಕಾರಿ ತ್ರಿಲೋಕಚಂದ್ರ  ಅವರು ಜಿಲ್ಲೆಯ ತಹಶೀಲ್ದಾರಗಳಿಗೆ ಸೂಚನೆ ನೀಡಿದರು.

ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ವಿಧಾನಸಭಾ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020ಕ್ಕೆ ಸಂಬಂಧಿಸಿದಂತೆ ಶಿಗ್ಗಾಂವ ತಹಶೀಲ್ದಾರ ಕಚೇರಿಯಲ್ಲಿ ಸಭೆ ನಡೆಸಿದ ಅವರು ವಿಧಾನಸಭಾ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020ಕ್ಕೆ ಸಂಬಂಧಿಸಿದಂತೆ ಸ್ವಿಕೃತವಾದ ನಮೂನೆ 6 ಮತ್ತು 7ನ್ನು ಈ ಸಂಜೆಯೊಳಗಾಗಿ ವಿಲೇಗೊಳಿಸಲು ತಹಶೀಲ್ದಾರಗಳಿಗೆ ಸೂಚನೆ ನೀಡಿದರು.

ಶಿಗ್ಗಾಂವ, ಸವಣೂರ, ಹಾನಗಲ್ ಹಾಗೂ  ಹಿರೇಕೆರೂರು ತಾಲೂಕುಗಳಲ್ಲಿ ಹೊಸ ಮತದಾರರ ನೊಂದಣಿ ಕುರಿತಂತೆ ಮಾಹಿತಿ ಪಡೆದ ಅವರು ಲಿಂಗಾನುಪಾತದ ವ್ಯತ್ಯಯ ಕುರಿತಂತೆ ಆಯಾ ತಹಶೀಲ್ದಾರಗಳು ನೀಡಿದ ಮಾಹಿತಿ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮತಗಟ್ಟೆಗಳಿಗೆ ಖುದ್ದಾಗಿ ಭೇಟಿ ನೀಡಿ ಅರ್ಹ ಮಹಿಳೆಯರನ್ನು ಮತದಾರರನ್ನಾಗಿ ಸೇರ್ಪಡೆಮಾಡುವ ಕುರಿತಂತೆ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದರು.

ಮುಖಂಡರ ಸಭೆ: ಇದೇ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ ಅವರು ಪ್ರತಿ ಮತಗಟ್ಟೆಗೆ ಓರ್ವ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ನಿಯೋಜಿಸಿ, ಶುದ್ಧ ಮತದಾರರ ಪಟ್ಟಿ ತಯಾರಿಸಲು ಸಹಕರಿಸಿ. ಕೈಬಿಟ್ಟು ಹೋಗಿರುವ ಮಹಿಳಾ ಮತದಾರರು ಸೇರಿದಂತೆ 18 ವರ್ಷ ತುಂಬಿದ ಯುವ ಮತದಾರರು ಸೇರ್ಪಡೆ ಒಳಗೊಂಡಂತೆ ಅರ್ಹ ಯಾವುದೇ ಮತದಾರರು ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋಗದಂತೆ ತಯಾರಿಸಲು ಹಾಗೂ  ಯಾವುದೇ ದೋಷವಿಲ್ಲದಂತೆ ಅಧಿಕಾರಿಗಳು ಪರಿಷ್ಕೃತ ಮತದಾರರ ಪಟ್ಟಿ ತಯಾರಿಸಲು ಸಹಕರಿಸಿ ಎಂದು ಕೋರಿದರು.

ಮತಗಟ್ಟೆಗಳಿಗೆ ಭೇಟಿ: ಇದೇ ಸಂದರ್ಭದಲ್ಲಿ ಶಿಗ್ಗಾಂವ ತಾಲೂಕಿನ ಖುಸರ್ಾಪೂರ, ಹಾನಗಲ್ ತಾಲೂಕಿನ  ಮಾಸಣಕಟ್ಟೆ ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಷ್ಕೃತ ಮತದಾರರ ಪಟ್ಟಿ ಕುರಿತಂತೆ ವಿವರವಾಗಿ ಪರಿಶೀಲಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿಗಳ ಎನ್.ತಿಪ್ಪೇಸ್ವಾಮಿ, ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ, ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರಗಳು ಇತರರು ಉಪಸ್ಥಿತರಿದ್ದರು.