ಗವಿಸಿದ್ದೇಶ್ವರ ರಥೋತ್ಸವ ಸಂಭ್ರಮ

ಲೋಕದರ್ಶನ ವರದಿ

ಕೊಪ್ಪಳ 25: ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಕರಿಯಮ್ಮ ದೇವಿ ಹಾಗೂ ಮಾರುತೇಶ್ವರನ ಕಾರ್ತಿಕೋತ್ಸವ ಅಂಗವಾಗಿ 27ನೇ ವರ್ಷದ ಗವಿಸಿದ್ದೇಶ್ವರ ಮಹಾರಥೋತ್ಸವವು ರವಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ನ. 21ರಂದು ರಾತ್ರಿ 8 ಗಂಟೆಗೆ ಶ್ರೀ ಗವಿಮಠದ ಹತ್ತಿರ ಬಸವ ಪಟ (ಧ್ವಜಾರೋಹಣ) ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ದೇವಿಯ ಕಂಕಣಧಾರಣೆ ನಡೆಯಿತು. ನ.22 ರಂದು ಅಭಿಷೇಕ, ಕೊಂಡ ಪೂಜೆ, ಕಾರ್ತಿಕೋತ್ಸವ, ಸಣ್ಣ ರಥೋತ್ಸವ, ಗಂಗಾಮಾತೆಯ ದರ್ಶನ ಮತ್ತು ಬೆಳಗು ಮುಂಜಾನೆ ಶ್ರೀದೇವಿಯ ಪಾಯಸ, ಅಗ್ನಿ ಆಯುವ ಕಾರ್ಯಕ್ರಮ ಜರುಗಿತು. ನ. 23ರಂದು ಮಾರುತೇಶ್ವರನಿಗೆ ಕುಂಕುಮ ಪೂಜೆ, ಗಿಡ, ಮುಳ್ಳು ಪಾಲ್ಕಿ, ಅಗ್ನಿ, ಮನೋರಂಜನೆಯ ಅಂಗವಾಗಿ ಡೊಳ್ಳಿನ ವಾದ್ಯ ನಂತರ ಅನ್ನಸಂತರ್ಪಣೆ ಜರುಗಿತು. ನ. 24ರಂದು ಬೆಳಿಗ್ಗೆ ಗವಿಸಿದ್ದೇಶ್ವರ ಸ್ವಾಮಿ ಕತೃ ಗದ್ದುಗೆಗೆ ಅಭಿಷೇಕ ಹಾಗೂ ಸಂಜೆ ಗವಿಸಿದ್ದೇಶ್ವರ ರಥೋತ್ಸವ, ಸಂಗೀತ ಕಾರ್ಯಕ್ರಮ ಹಾಗೂ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿತು. ನ.25 ರಂದು ಸಂಜೆ ಗವಿಸಿದ್ದೇಶ್ವರ ಮೂತರ್ಿ ಉತ್ಸವ ಹಾಗೂ ಮದ್ದು ಸುಡುವ ಕಾರ್ಯಕ್ರಮ, ನ. 26ರಂದು ಸಾಯಂಕಾಲ ಗವಿಸಿದ್ದೇಶ್ವರನ ಕಡಬಿನ ಕಾಳಗ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ.

ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮಿಗಳು, ಹಿರೇಸಿಂದೋಗಿ ಕಪ್ಪತ್ತಮಠದ ಚಿದಾನಂದ ಸ್ವಾಮಿಗಳು, ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಂಗಳೂರಿನ ಅರಳಲೆ ಹಿರೇಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮಿಗಳು, ಹೂವಿನಹಡಗಲಿಯ ಶಾಖಾ ಗವಿಮಠದ ಡಾ. ಹಿರಿಶಾಂತವೀರ ಸ್ವಾಮಿಗಳು, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಮೈನಳ್ಳಿ ಹಿರೇಮಠದ ಸಿದ್ಧೇಶ್ವರ ಶಿವಚಾರ್ಯ ಸ್ವಾಮಿಗಳು, ಬಳಗಾನೂರಿನ ಚಿಕ್ಕೇನಕೊಪ್ಪದ ಚೆನ್ನವೀರ ಶರಣಮಠದ ಶಿವಶಾಂತವೀರ ಶರಣರು, ಹಾಲವತರ್ಿಯ ಜಡೇಶ್ವರ ಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ ಸೇರಿದಂತೆ ಗ್ರಾ.ಪಂ.ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಹಿರಿಯರು, ಯುವಕರು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.