ದೆಹಲಿ, ಆ 12 ಕಳೆದ ಹಲವು ವರ್ಷಗಳಿಂದ ಟೀಮ್ ಇಂಡಿಯಾ ಬ್ಯಾಟಿಂಗ್ ನಾಲ್ಕನೇ ಕ್ರಮಾಂಕದ ಸಮಸ್ಯೆ ಎದುರಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿಯವರೆಗೂ ಹಲವರು ಈ ಕ್ರಮಾಂಕದಲ್ಲಿ ಸೂಚಿಸಲಾಗಿತ್ತು. ಆದರೆ, ಯಾರಿಂದಲೂ ಗಮನಾರ್ಹ ಪ್ರದರ್ಶನ ಮೂಡಿ ಬಂದಿಲ್ಲ. ಆದರೆ, ಇದೀಗ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಎರಡನೇ ಏಕದಿನ ಪಂದ್ಯದ ಬಳಿಕ ಭಾರತದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ನಾಲ್ಕನೇ ಕ್ರಮಾಂಕಕ್ಕೆ ಒಬ್ಬ ಯುವ ಆಟಗಾರನನ್ನು ಸೂಚಿಸಿದ್ದಾರೆ. ಭಾನುವಾರ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ನಾಲ್ಕನೇ ವಿಕೆಟ್ಗೆ 125 ರನ್ ದಾಖಲಿಸಲು ನೆರವಾಗಿದ್ದ ಶ್ರೇಯಸ್ ಅಯ್ಯರ್ ಅವರ ಹೆಸರನ್ನು ಸುನೀಲ್ ಗವಾಸ್ಕರ್ ನಾಲ್ಕನೇ ಕ್ರಮಾಂಕಕ್ಕೆ ಗುರುತಿಸಿದ್ದಾರೆ. ಶ್ರೇಯಸ್ ಅಯ್ಯರ್ ಇದಕ್ಕೂ ಮುನ್ನ ವೆಸ್ಟ್ ಇಂಡೀಸ್(ಎ) ವಿರುದ್ಧದ 'ಎ' ಲಿಸ್ಟ್ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಭಾನುವಾರವೂ ಕೂಡ 68 ಎಸೆತಗಳಲ್ಲಿ 71 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು. ಎಂ.ಎಸ್ ಧೋನಿ ಅವರ ರೀತಿ ರಿಷಭ್ ಪಂತ್ ಅವರು 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಸೂಕ್ತ. ಶ್ರೇಯಸ್ ಅಯ್ಯರ್ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಒಳ್ಳೆಯದು ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ. ಬ್ಯಾಟಿಂಗ್ ಬಗ್ಗೆ ಹೆಚ್ಚಿನ ಜ್ಞಾನ ವೃದ್ಧಿಸಿಕೊಳ್ಳಬೇಕಾದರೆ ಹೆಚ್ಚು ಸಮಯ ನಾನ್ ಸ್ಟ್ರೈಕ್ನಲ್ಲಿ ನಿಲ್ಲಬೇಕು. ಈ ಕೆಲಸವನ್ನು ಎರಡನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮಾಡಿದ್ದಾರೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಶ್ರೇಯಸ್ ಅಯ್ಯರ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು. ಆದರೆ, ಅವರನ್ನು ಐಸಿಸಿ ವಿಶ್ವಕಪ್ಗೆ ಪರಿಗಣಿಸಿರಲಿಲ್ಲ. ಅಯ್ಯರ್ ಏಕದಿನ ಕ್ರಿಕೆಟ್ನಲ್ಲಿ ದೀರ್ಘ ಕಾಲ ಉಳಿಯಲಿದ್ದಾರೆಂಬ ಬಗ್ಗೆ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ.