ಗೌತಮ್ ಅದಾನಿ ಸೋದರ ವಿನೋದ್ ಶಾಂತಿಲಾಲ್ ಅದಾನಿ ಅತ್ಯಂತ ಶ್ರೀಮಂತ NRI
ನವದೆಹಲಿ : ಸೆಪ್ಟೆಂಬರ್ 23: IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ ಉದ್ಯಮಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಯವರ ಹಿರಿಯ ಸಹೋದರ ವಿನೋದ್ ಶಾಂತಿಲಾಲ್ ಅದಾನಿ ಅವರು ಶ್ರೀಮಂತ ಅನಿವಾಸಿ ಭಾರತೀಯ (NRI) ಆಗಿದ್ದಾರೆ. ವಿನೋದ್ ಶಾಂತಿಲಾಲ್ ಅದಾನಿ ಅವರು ಪಟ್ಟಿಯಲ್ಲಿ ಆರನೇ ಶ್ರೀಮಂತ ಭಾರತೀಯರಾಗಿದ್ದು, 1.69 ಲಕ್ಷ ಕೋಟಿ ರೂ. ಸಂಪತ್ತಿನ ಒಡೆಯರಾಗಿದ್ದಾರೆ.
ಈ ವರ್ಷ 94 ಅನಿವಾಸಿ ಭಾರತೀಯರು ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿನೋದ್ ಶಾಂತಿಲಾಲ್ ಅದಾನಿ ಅತ್ಯಂತ ಶ್ರೀಮಂತ ಎನ್‌ಆರ್‌ಐ ಆಗಿ ಹೊರಹೊಮ್ಮಿದ್ದರೆ, ಹಿಂದೂಜಾ ಸಹೋದರರು 1.65 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಎನ್‌ಆರ್‌ಐಗಳ ಪೈಕಿ ಯುನೈಟೆಡ್ ಸ್ಟೇಟ್ಸ್ ನ 48 ಮಂದಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು 70,000 ಕೋಟಿ ರೂ. ಸಂಪತ್ತನ್ನು ಹೊಂದಿರುವ ಜಯ್ ಚೌಧರಿ ಯುಎಸ್‌ನಲ್ಲಿ ವಾಸಿಸುವ ಅತ್ಯಂತ ಶ್ರೀಮಂತ ಎನ್‌ಆರ್‌ಐ ಆಗಿದ್ದಾರೆ.
ವಿನೋದ್ ಶಾಂತಿಲಾಲ್ ಅದಾನಿ ದುಬೈನಲ್ಲಿ ವಾಸಿಸುತ್ತಿದ್ದಾರೆ ಮತ್ತು ಸಿಂಗಾಪುರ್, ದುಬೈ ಮತ್ತು ಜಕಾರ್ತಾದಲ್ಲಿ ವ್ಯಾಪಾರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಅವರು 1976 ರಲ್ಲಿ ಮುಂಬೈನಲ್ಲಿ ಜವಳಿ ವ್ಯಾಪಾರವನ್ನು ಪ್ರಾರಂಭಿಸಿದರು ಮತ್ತು ನಂತರ ಸಿಂಗಾಪುರದಲ್ಲಿ ಅದನ್ನು ವಿಸ್ತರಿಸಿದರು. ಗೌತಮ್ ಅದಾನಿಯವರ ಹಿರಿಯ ಸಹೋದರ 1994 ರಲ್ಲಿ ದುಬೈಗೆ ತೆರಳಿದ ನಂತರ ಮಧ್ಯಪ್ರಾಚ್ಯಕ್ಕೆ ವ್ಯಾಪಾರವನ್ನು ವಿಸ್ತರಿಸಿದರು.
ಕಳೆದ ವರ್ಷದಲ್ಲಿ ವಿನೋದ್ ಶಾಂತಿಲಾಲ್ ಅದಾನಿ ಅವರ ಸಂಪತ್ತು 37,400 ಕೋಟಿ ರೂ. ಹೆಚ್ಚಾಗಿದೆ. ಇದು 28 ಶೇಕಡಾ ಹೆಚ್ಚಳ. ಅಂದರೆ ವಿನೋದ್ ಶಾಂತಿಲಾಲ್ ಅದಾನಿ ಕಳೆದ ವರ್ಷ ಪ್ರತಿದಿನ ಸರಾಸರಿ 102 ಕೋಟಿ ರೂ. ಗಳಿಸಿದ್ದಾರೆ. ಕಳೆದ ವರ್ಷ ತನ್ನ ಎಂಟನೇ ಶ್ರೇಯಾಂಕದಿಂದ ಆರನೇ ಸ್ಥಾನವನ್ನು ಪಡೆದು ಅವರು ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಎರಡು ಶ್ರೇಯಾಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ವಿನೋದ್ ಶಾಂತಿಲಾಲ್ ಅದಾನಿ ಅವರ ಸಂಪತ್ತು ಶೇಕಡಾ 850 ರಷ್ಟು ಹೆಚ್ಚಾಗಿದೆ. ಗೌತಮ್ ಅದಾನಿ ಮತ್ತು ಕುಟುಂಬದ ಸಂಪತ್ತು ಐದು ವರ್ಷಗಳಲ್ಲಿ 15.4 ಪಟ್ಟು ಏರಿಕೆ ಕಂಡಿದ್ದರೆ, ವಿನೋದ್ ಶಾಂತಿಲಾಲ್ ಅದಾನಿ ಮತ್ತು ಕುಟುಂಬವು 9.5 ಪಟ್ಟು ಶ್ರೀಮಂತವಾಗಿದೆ.
ಗೌತಮ್ ಅದಾನಿ ಮೊದಲ ಬಾರಿಗೆ 10,94,400 ಕೋಟಿ ರೂ. ಸಂಪತ್ತು ಹೊಂದಿರುವ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2022 ರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಪಟ್ಟಿಯ ಪ್ರಕಾರ ಕಳೆದ ವರ್ಷಕ್ಕೆ ದಿನಕ್ಕೆ 1,600 ಕೋಟಿ ರೂ. ಗಳಿಸಿದ್ದಾರೆ.