ಕೋಡ್ ವರ್ಡ್ ಮೂಲಕ ನಡೆಯುತ್ತಿತ್ತು ಗೌರಿ ಹಂತಕರ ಸಂಭಾಷಣೆ !

ಬೆಂಗಳೂರು, ಜ. 10 , ಗೌರಿ ಲಂಕೇಶ್ ಹತ್ಯೆಯ ಆರೋಪಿಗಳು ಕೋಡ್ ವರ್ಡ್ ಮೂಲಕವೇ  ಸಂಭಾಷಣೆ ನಡೆಸುತ್ತಿದ್ದರು ಎಂಬ ಮಾಹಿತಿಯೊಂದು ವಿಚಾರಣೆ ವೇಳೆ ಲಭ್ಯವಾಗಿದೆ. ಗುರುವಾರ ಜಾರ್ಖಂಡ್ ನಲ್ಲಿ ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರುಳಿಯನ್ನು ಎಸ್ ಐಟಿ ತಂಡ ಬಂಧಿಸಿದ್ದು, ಈತ ಗೌರಿ ಲಂಕೇಶ್  ಹಾಗೂ ಎಂ ಎಂ ಕಲ್ಬುರ್ಗಿ ಅವರ ಹತ್ಯೆಯಲ್ಲಿಯೂ ಪ್ರಮುಖ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ. ಹತ್ಯೆಗೆ ಬಳಸಿದ್ದ ಪಿಸ್ತೂಲ್ ಅನ್ನು ಸುದರ್ಶನ ಚಕ್ರ ಎಂದು ಹಂತಕರು ಕರೆಯುತ್ತಿದ್ದರಂತೆ. ಯಾವುದೇ ಕ್ರೈಂ ಸಂಬಂಧಿತ ಶಬ್ದಗಳನ್ನು ಬಳಸಿದೇ ಅತಿ ಚಾಲಾಕಿಯಿಂದ ಸಂಹಾರದ ನಂತರ ಸುದರ್ಶನ ಚಕ್ರ ಕೃಷ್ಣನ ಕೈ ಸೇರಿದೆ ಎಂದು ಆರೋಪಿಗಳು ಸಂಭಾಷಣೆ ನಡೆಸುತ್ತಿದ್ದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಹಿಂದೂ ಪರ ಯುದ್ಧ ಮಾಡುತ್ತಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ. ಕಳೆದ 2 ವರ್ಷಗಳಿಂದ ಮುರ0ಳಿಗಾಗಿ ಎಸ್ಐಟಿ ಹಾಗೂ ಸಿಬಿಐ ತಂಡ ಶೋಧ ಕಾರ್ಯ ನಡೆಸಿತ್ತು. ಆದರೆ, ಈತನನ್ನು ಜಾರ್ಖಂಡ್ನ ಧನಾಬಾದ್ ಜಿಲ್ಲೆಯ ಕತ್ರಾಸ್ ಎಂಬಲ್ಲಿ ಬಂಧಿಸಲಾಗಿದೆ. ಹತ್ಯೆಯ ಬಳಿಕ ಈತ ಸುಂಕದ ಕಟ್ಟೆ ಸುರೇಶ್ ಎಂಬುವವರ ಮನೆಗೆ ಎರಡು ಬಾರಿ ಬಂದು ಹೋಗಿದ್ದ ಎಂದು ತಿಳಿದು ಬಂದಿದೆ.  ಆರೋಪಿ ಅಮೋಲ್ ಕಾಳೆ ಬಳಿ ದೊರಕಿದ್ದ ಡೈರಿಯಲ್ಲಿ ಮುರುಳಿಗೆ ಮಹತ್ವದ ಸ್ಥಾನ ನೀಡಲಾಗಿತ್ತು. ಅಲ್ಲದೇ, ಅಮೋಲ್ ಹೊರತಾಗಿ ಉಳಿದ 17 ಆರೋಪಿಗಳಿಗೆ ಈತನ ಪರಿಚಯವಿರಲಿಲ್ಲ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಬಂಧಿತ ಆರೋಪಿ ಮುರುಳಿಯನ್ನು ಇಂದು ಜಾರ್ಖಂಡ್ ಕೋರ್ಟಿಗೆ ಹಾಜರು ಪಡಿಸಿ, ನಂತರ ರೈಲ್ವೆ ಮೂಲಕ ಅಧಿಕಾರಿಗಳು ಆತನನ್ನು ಬೆಂಗಳೂರಿಗೆ ಕರೆತರಲಿದ್ದಾರೆ ಎಂದು ತಿಳಿದು ಬಂದಿದೆ.