ಗಂಗಾ ನದಿ ನೀರು ಈಗ ಅತ್ಯಂತ ಕಲುಷಿತ: ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌

Ganga river water most polluted now: MP Jaya Bachchan

ಹೊಸದಿಲ್ಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಹರಿಯುತ್ತಿರುವ ಗಂಗಾ ನದಿಯ ನೀರು ಈಗ ಅತ್ಯಂತ ಕಲುಷಿತವಾಗಿದೆ. ಈಗ ದೇಶದ ಅತ್ಯಂತ ಕಲುಷಿತ ನೀರು ಎಲ್ಲಿದೆ? ಎಂಬ ಪ್ರಶ್ನೆ ಯಾರನ್ನೇ ಕೇಳಿದರೂ ಅದಕ್ಕೆ ಉತ್ತರ ಮಹಾಕುಂಭದಲ್ಲಿದೆ ಎಂಬ ಉತ್ತರ ಬರುತ್ತದೆ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌ ಹೇಳಿದರು.

ಸಂಸತ್ತಿನ ಆವರಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ ಅವರು ಇತ್ತೀಚೆಗೆ ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ದೇಹಗಳನ್ನು ನದಿಗೆ ಎಸೆದಿದ್ದರಿಂದ ಗಂಗಾ ನದಿ ನೀರು ಕಲುಷಿತಗೊಂಡಿದೆ ಗಂಭೀರ ಆರೋಪ ಮಾಡಿದ್ದಾರೆ.

ಮಹಾಕುಂಭ ನಡೆಯುತ್ತಿರುವ ಸ್ಥಳದ ನಿಜವಾದ ಸಮಸ್ಯೆಗಳ ಪರಿಹರಿಸುತ್ತಿಲ್ಲ. ಮಹಾಕುಂಭಕ್ಕೆ ಭೇಟಿ ನೀಡುವ ಸಾಮಾನ್ಯ ಜನರಿಗೆ ಯಾವುದೇ ವಿಶೇಷ ಸೌಲಭ್ಯಗಳ ಕಲ್ಪಿಸುತ್ತಿಲ್ಲ. ವಿಐಪಿ ಭಕ್ತರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಆದರೆ ಅವರಿಗೆ ಸರಿಯಾದ ವ್ಯವಸ್ಥೆ ಇಲ್ಲ. 34ಕೋಟಿಗೂ ಹೆಚ್ಚು ಜನರು ಮಹಾಕುಂಭಕ್ಕೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರ ಸುಳ್ಳು ಹೇಳುತ್ತಿದೆ. ಒಂದು ಸ್ಥಳದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಹೇಗೆ ಸೇರಲು ಸಾಧ್ಯ? ಮಹಾ ಕುಂಭ ಮೇಳದ ಬಗ್ಗೆ ಸರ್ಕಾರ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ ಎಂದು ಜಯಾ ಬಚ್ಚನ್ ಹೇಳಿದರು.