ಗ್ರಾ.ಪಂ. ಸಿಬ್ಬಂದಿ ಅಸಭ್ಯ ವರ್ತನೆ ಸಾರ್ವಜನಿಕರು ತನಿಖೆಗೆ ಆಗ್ರಹಿಸಿ ಮನವಿ

ಬೈಲಹೊಂಗಲ 28:  ಸಮೀಪದ ಹೊಸೂರ ಗ್ರಾಮದ ಪಂಚಾಯತಿ ಸಿಬ್ಬಂದಿಯು ತಮಗೆ ಇಷ್ಟ ಬಂದಂತೆ ತೋರುತಿದ್ದ ದುವರ್ತನೆಯನ್ನು ವಿಚಾರಿಸಲು ದಿ.27ರಂದು ಗ್ರಾಮ ಪಂಚಾಯತಿ ಕಾರ್ಯಾ ಲಯಕ್ಕೆ ಆಗಮಿಸಿದ್ದ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಪಿ.ದೇವರಮನಿ ಮುಂದೆ ಗ್ರಾಪಂ ಸದಸ್ಯರು ಮತ್ತು ಸಾರ್ವಜನಿಕರು ಅನೇಕ ಅವ್ಯವಹಾರಗಳನ್ನು ಬಯಲಿಗೆಳೆದು ಅವುಗಳ ತನಿಖೆಗೆ ಆಗ್ರಹಿಸಿ ಮನವಿ ನೀಡಿದರು.

      ಕಳೆದ ಎಂಟು ತಿಂಗಳ ಹಿಂದೆ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಅಬ್ಬಾಸಲಿ ಮುಜಾವಾರ ತನ್ನ ಕರ್ತವ್ಯದಲ್ಲಿ ನಿರ್ಲಕ್ಷವಹಿಸಿ ಸದಾ ಮೊಬೈಲದಲ್ಲಿ ಕಾಲ ಕಳೆಯುತ್ತಿರುವ ಬಗ್ಗೆ ಮತ್ತು ಪಿಡಿಓ ಇಲ್ಲದ ಸಮಯದಲ್ಲಿ ಬೇಜವಾಬ್ದಾರಿತನದಿಂದ ವರ್ತಿಸುವುದರ ವಿರುದ್ದ ಸಾರ್ವಜನಿಕರು ಪತ್ರಿಕೆಯ ಮೂಲಕ ಹಿರಿಯ ಅಧಿಕಾರಿಗಳ ಗಮನ ಸೆಳದಿದ್ದರು. ಇದನ್ನು ಮನಗಂಡ ಅಧಿಕಾರಿಗಳು ಗ್ರಾಪಂ ಕಛೇರಿಗೆ ಆಗಮಿಸಿ ಆತನಿಗೆ ಎಚ್ಚರಿಕೆಯ ನೋಟಿಸ್ ನೀಡಿ ತಪ್ಪೋಪ್ಪಿಗೆ ಪತ್ರ ಬರೆಯಿಸಿಕೊಂಡು ಸಾರ್ವಜನಿಕರನ್ನು ಕ್ಷಮೆ ಕೇಳಿ ಒಂದಿ ತಿಂಗಳಲ್ಲಿ ಸುಧಾರಿಸಿಕೊಳ್ಳುವದಾಗಿ ಮತ್ತು ಇಂತಹ ಘಟನೆ ಇನ್ನೊಮ್ಮೆ ಆಗದಂತೆ ಎಚ್ಚರವಹಿಸುವದಾಗಿ ಹೇಳಿದನಂತರ ಪ್ರಕರಣ ಸುಖಾಂತ್ಯಕಂಡಿತು.

  ಹಿಂದೆ ಕಾರ್ಯನಿರ್ವಹಿಸಿದ ಪಿಡಿಓ ನಡೆಸಿದ ಲಕ್ಷಾಂತರ ರುಪಾಯಿಗಳ ಅವ್ಯವಹಾರ ಬಯಲಿಗೆ: ಕೆಲ ದಿನಗಳ ಹಿಂದೆ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಹಿಂದೆ ಕಾರ್ಯನಿರ್ವಹಿಸಿದ್ದ ಪಿಡಿಓ ಮಲ್ಲಪ್ಪ ಹಾರುಗೊಪ್ಪ ಸರ್ಕಾರಕ್ಕೆ ಗುತ್ತಿಗೆದಾರರಿಂದ ತುಂಬ ಬೇಕಾಗಿದ್ದ ರೂ 78703 ತುಂಬದೆ ಇರುವದು, ಗ್ರಾಮದಲ್ಲಿ ಲಕ್ಷಾಂತರ ರೂಪಾಯಿಗಳಲ್ಲಿ ಕೈಗೊಂಡಿದ್ದ ಕಾಮಗಾರಿಗಳ ಬಿಲ್ಲನ್ನು ತಗೆದು ಅವುಗಳನ್ನು ಸಂಬಂದಿಸಿದವರಿಗೆ ಕೊಡದೆ ಹೋಗಿರುವದು, ಗ್ರಾಮಸ್ಥರಿಂದ ಸಂಗ್ರಹಿಸಿದ ಮನೆಯ ತೆರಿಗೆ ಹಣದಲ್ಲಿ ಬಾರಿ ಅವ್ಯವಹಾರ ನಡೆದಿದ್ದು ಮತ್ತು ಹೊಸ ಬಡಾವಣೆಯಲ್ಲಿ ಪ್ಲಾಟಗಳನ್ನು ಖರೀದಿಸಿದ ಪ್ರತಿ ವ್ಯಕ್ತಿಗಳಿಂದ ಸುಮಾರು 12 ರಿಂದ 14 ಸಾವಿರ ಹಣ ಪಡೆದು ಆ ಹಣವನ್ನು ಸರ್ಕಾರದ ಬೊಕ್ಕಸಕ್ಕು ಕಟ್ಟದೆ ಅಭಿವೃದ್ಧಿ ಕಾಮಗಾರಿಗೂ ಬಳಸದೆ ಕಿಸಿಗೆ ಹಾಕಿಕೊಂಡು ಹೋಗಿರುವದಾಗಿ ದೂರಿ 2017ರ ಎಪ್ರೀಲ್ 1 ರಿಂದ ಇಲ್ಲಿಯವರೆಗೆ ನಡೆದಿರುವ ಗ್ರಾಮ ಪಂಚಾಯತಿ ಹಣಕಾಸಿನ ವ್ಯವಹಾರವನ್ನು ತನಿಖೆಗೆ ಒಳಪಡಿಸಬೇಕೆಂದು ಲಿಖಿತವಾಗಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಬಿ.ದೇವರಮನಿ ಅವರಿಗೆ ಗ್ರಾಪಂ ಅಧ್ಯಕ್ಷೆ ಪಾರವ್ವ ಮೂಗಬಸವ ಸದಸ್ಯರಾದ ಈರಣ್ಣ ಸಂಪಗಾಂವ, ಸೋಮಲಿಂಗ ಮೇಳ್ಳಿಕೇರಿ, ಮಲ್ಲಪ್ಪ ಯರಡಾಲ. ಬಸವರಾಜ ವಿವೇಕಿ, ಮಡಿವಾಳಪ್ಪ ಜಾಧವ, ಮೋಹನ ವಕ್ಕುಂದ, ದಿಲಾವಾರ ಧೂಪದಾಳ, ಮುನೀರ ಶೇಖ, ಸುನಂದಾ ಗಡ್ಡಿ, ಮಲ್ಲವ್ವ ಸುತಗಟ್ಟಿ ಮನವಿ ಅರ್ಪಿಸಿದರು.

     ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಬಿ.ದೇವರಮನಿ,  ಈ ಬಗ್ಗೆ ತಾವು ಲಿಖಿತವಾಗಿ ದೂರು ಕೊಟ್ಟಿರುವದರಿಂದ ನಮ್ಮ ಕಛೇರಿಯ ಲೆಕ್ಕ ಪತ್ರ ವಿಭಾಗದವರಿಂದ ಒಂದು ವಾರದಲ್ಲಿ ಸಮಗ್ರ ತನಿಖೆಗೆ ಒಳಪಡಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವದು. ಹಣ ಕಳೆದುಕೊಂಡ ಜಾಗಾ ಖರೀದಿಗಾರರಿಂದ ವೈಕ್ತಿಕ ದೂರುಗಳನ್ನು ತಗೆದುಕೊಳ್ಳುವಂತೆ ಪಿಡಿಓ ಚಂದ್ರ ಮೋಹನರಿಗೆ ಆದೇಶಿಸಿದರು. ಅಲ್ಲದೆ ಅವರ ಹಣ ಮರಳಿ ಕೊಡಿಸುವ ಭರವಸೆ ನೀಡಿದರಲ್ಲದೆ ಆ ಭಡಾವಣೆಗೆ ವಿದ್ಯುತ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವದಾಗಿ ಹೇಳಿದರು.

   ಈ ಸಂದರ್ಭದಲ್ಲಿ ಸಾರ್ವಜನಿಕರಾದ ಅಪ್ಪಯ್ಯ ಬೋಳತ್ತಿನ, ರಮೇಶ ವಕ್ಕುಂದ, ನಾಗರಾಜ ಬುಡಶಟ್ಟಿ, ಸುರೇಶ ಬಾಳೇಕುಂದರಗಿ, ಎಫ್,ಎಸ್,ಸಿದ್ದನಗೌಡರ, ಸೋಮಲಿಂಗ ಸಂಗೋಳ್ಳಿ ಮುಂತಾದವರು ಇದ್ದರು.