ಮಹಾಲಿಂಗಪುರ 21: ಬಹು ದಿನಗಳ ಬೇಡಿಕೆಯಾಗಿರುವ ಮಹಾಲಿಂಗಪುರ ನೂತನ ತಾಲೂಕು ಘೋಷಣೆಗೆ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ, ಹೋರಾಟ ಸಮಿತಿ ಶನಿವಾರ ಬನಶಂಕರಿ ದೇವಿ ದೇವಸ್ಥಾನದಲ್ಲಿ ಸಭೆ ಸೇರಿ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿಸುವ ಮತ್ತು ಇನ್ನಿತರ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಪರಾಮರ್ಶೆ ನಡೆಸಿತು.
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಪ್ರಮುಖರು ಚುನಾವಣೆ ಬಹಿಷ್ಕರಿಸುವ ನಿಟ್ಟಿನ ಸಾಧಕ ಬಾಧಕಗಳ ಕುರಿತು ತಮ್ಮ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪಡಿಸಿ ಮುಕ್ತವಾಗಿ ಚರ್ಚೆ ನಡೆಸಿ, ಮಹಾಲಿಂಗಪುರ ನೂತನ ತಾಲೂಕು ಘೋಷಣೆ ಆಗುವವರೆಗೆ ನಡೆದಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೋರಾಟ ಸಮಿತಿಗೆ ತಮ್ಮ ಅಭಿಪ್ರಾಯ ತಿಳಿಸಿದರು.
ಸಭೆಯಲ್ಲಿ ಸ್ಥಳೀಯ ಪಟ್ಟಣದ ಎಲ್ಲ ಪಕ್ಷಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಭೆ ಕರೆದು ಅವರಿಂದ ಅಭಿಪ್ರಾಯ ಕ್ರೋಡೀಕರಿಸಿ, ಹೋರಾಟಕ್ಕೆ ಇನ್ನಷ್ಟು ಬಲ ನೀಡುವ ಕುರಿತು ಮನವಿ ಮಾಡಬೇಕೆಂಬ ವಿಷಯಕ್ಕೆ ಸಭೆ ಚಪ್ಪಾಳೆ ಮೂಲಕ ಅನುಮೋದಿಸಿತು.
ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಧರೆಪ್ಪ ಸಾಂಗಲಿಕರ, ರಂಗನಗೌಡ ಪಾಟೀಲ, ಸುಭಾಶ ಶಿರಬೂರ, ಮಹಾಂತೇಶ ಹಿಟ್ಟಿನಮಠ, ಮಹಾದೇವ ಮಾರಾಪುರ, ಗಂಗಾಧರ ಮೇಟಿ, ಸುರೇಶ ಹಾದಿಮನಿ, ವೀರೇಶ ಆಸಂಗಿ, ಮಹಮ್ಮದ್ ಹೂಲಿಕಟ್ಟಿ ಮಾತನಾಡಿದರು.
ನಿಂಗಪ್ಪ ಬಾಳಿಕಾಯಿ, ಸಿದ್ದು ಶಿರೋಳ, ಮಹಾಲಿಂಗಪ್ಪ ಸನದಿ, ದುಂಡಪ್ಪ ಜಾಧವ, ಚನ್ನು ದೇಸಾಯಿ, ಭೀಮಶಿ ಸಸಾಲಟ್ಟಿ, ಮಡಿವಾಳಯ್ಯ ಕಂಬಿ, ಪರ್ಪ ಬ್ಯಾಕೋಡ, ಚನ್ನಪ್ಪ ಪಟ್ಟಣಶೆಟ್ಟಿ ಮತ್ತು ರಫೀಕ್ ಮಾಲದಾರ ಇದ್ದರು.