ಮಾಧ್ಯಮ ವೃತ್ತಿಯಲ್ಲಿಯ ಮೋಜಿನ ಪ್ರಸಂಗಗಳು

ಮಾಧ್ಯಮ ವೃತ್ತಿಯಲ್ಲಿಯ ಮೋಜಿನ ಪ್ರಸಂಗಗಳು   Fun facts about the media profession

ಮಾಧ್ಯಮ ವೃತ್ತಿಯಲ್ಲಿಯ ಮೋಜಿನ ಪ್ರಸಂಗಗಳು   

ಬೆಳಗಾವಿ 16: ಪತ್ರಿಕಾ ರಂಗವೆಂದರೇನೇ ಶಬ್ದ ಪ್ರಪಂಚ. ಇಲ್ಲಿ ಶಬ್ದಗಳ ಮೂಲಕ  ಹಾಸ್ಯ ಹುಟ್ಟಿಕೊಳ್ಳುವುದೇ ಹೆಚ್ಚು. ಅಕ್ಷರಗಳ ಮೂಲಕ ಆವಾಂತರಗಳು ಆಗುತ್ತವೆ. ಕೆಲವೊಮ್ಮೆ ಅನಾಹುತಗಳೂ ಆಗುತ್ತವೆ. ಈ ಆವಾಂತರಗಳಿಂದ ಸಹಜವಾಗಿ ಹಾಸ್ಯ ಹುಟ್ಟುತ್ತದೆ ಎಂದು ಹಿರಿಯ ಪತ್ರಕರ್ತ ಎಲ್‌. ಎಸ್‌. ಶಾಸ್ತ್ರಿ ಅವರು ಹೇಳಿದರು.  

ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ದಿ. 13 ಶನಿವಾರದಂದು ಸಾಯಂಕಾಲ 4.30 ಕ್ಕೆ ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ವೃತ್ತಿಯಲ್ಲಿಯ ಮೋಜಿನ ಪ್ರಸಂಗಗಳು ಎಂಬ ಹಾಸ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡುತ್ತಿದ್ದರು. 

ಮಾಧ್ಯಮವೆನ್ನುವುದು ವಿಶಾಲವಾದದ್ದು ಅಲ್ಲದೇ ಇದು ವೈವಿಧ್ಯಮಯವಾದ ಅನುಭವಗಳನ್ನು ನೀಡುವಂತಹದ್ದು ಆದ್ದರಿಂದ ಇಲ್ಲಿ ಸಾಕಷ್ಟು ಮೋಜಿನ ಪ್ರಸಂಗಗಳು ಹುಟ್ಟಿಕೊಳ್ಳುವುದು ಸಹಜವಾಗಿದೆ ಎಂದು ಹೇಳಿದರು.  

ಹಾಸ್ಯಕೂಟ ಸಂಘಟನೆಯ ಸಂಚಾಲಕ ಮತ್ತು ವರದಿಗಾರ ಗುಂಡೇನಟ್ಟಿ ಮಧುಕರ ಮಾತನಾಡಿ ಹಾಸ್ಯಕೂಟ ಬೆಳವಣಿಗೆಯ ಹಿಂದೆ ಎಲ್ಲ ಮಾಧ್ಯಮ ಮಿತ್ರರ ಪಾತ್ರ ತುಂಬ ಮಹತ್ವದ್ದಿದೆ. ಮಾಧ್ಯಮದ ಸಹಾಯ ಸಹಕಾರವನ್ನು ನಾನೆಂದೂ ಮರೆಯಲಾರೆ ಎಂದು ಹೇಳಿ ತಮ್ಮ ಪತ್ರಿಕಾ ವೃತ್ತಿಯಲ್ಲಿ ಘಟಿಸಿದ ಕೆಲ ರಸಪ್ರಸಂಗಗಳನ್ನು ಹಂಚಿಕೊಂಡರು.  

ಮಾಧ್ಯಮದಲ್ಲಿಯ ಮೋಜಿನ ಪ್ರಸಂಗಗಳನ್ನು ಪಿ.ಟಿ.ಐ. ಜಿಲ್ಲಾ ವರದಿಗಾರ ಸುಭಾಸ ಕುಲಕರ್ಣಿ, ದ ಹಿಂದು ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ ಬಹದ್ದೂರ ದೇಸಾಯಿ, ಗಡಿಕನ್ನಡಿಗ ಪತ್ರಿಕೆ ಸಂಪಾದಕ ಮುರುಗೇಶ ಶಿವಪೂಜಿ ಮತ್ತು ಟೈಮ್ಸ ಆಫ್ ಇಂಡಿಯಾ ಪತ್ರಿಕೆ ಹಿರಿಯ ಜಿಲ್ಲಾ ವರದಿಗಾರ ರವೀಂದ್ರ ಉಪ್ಪಾರ ಹಂಚಿಕೊಂಡು ಜನರನ್ನು ರಂಜಿಸಿದರು. ಪ್ರಾಯೋಜಕತ್ವವನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಕೀರ್ತಿಶೇಖರ ಕಾಸರಗೋಡು ವಹಿಸಿಕೊಂಡಿದ್ದರು.  

ಅಧ್ಯಕ್ಷತೆಯನ್ನು ಹಿರಿಯ ಕವಿ  ಪ್ರೊ. ಎಂ. ಎಸ್‌. ಇಂಚಲ ವಹಿಸಿದ್ದರು. ಅರವಿಂದ ಹುನಗುಂದ ನಿರೂಪಿಸಿದರು. ತಾನಾಜಿ ವಂದಿಸಿದರು.