ಬ್ಯಾಂಕ್ ಅಧಿಕಾರಿ ಶೆಟ್ಟಿಯಿಂದ ಸಿಬ್ಬಂದಿ ತರಾಟೆಗೆ

ಬೈಲಹೊಂಗಲ : ಪಟ್ಟಣದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿಗೆ ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ಶೇಖರ ಶೆಟ್ಟಿ ಗುರುವಾರ ಸಂಜೆ ಭೇಟಿ ನೀಡಿ ಬ್ಯಾಂಕ್ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

      ಬ್ಯಾಂಕ್ ಸಿಬ್ಬಂದಿ ರೈತರು, ಗ್ರಾಹಕರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ ಬಗ್ಗೆ ಡಿ.5ರಂದು ಎಲ್ಲ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಅದನ್ನು ಕಂಡ ವ್ಯವಸ್ಥಾಪಕರು ಬ್ಯಾಂಕಿಗೆ ಬಂದು ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು. 

    ಗ್ರಾಹಕರೊಂದಿಗೆ ಮಾತನಾಡಿ, ಸಿಬ್ಬಂದಿಯಿಂದ ಆದ ಪ್ರಮಾದಕ್ಕೆ ವಿಷಾಧ ವ್ಯಕ್ತಪಡಿಸಿದರು. ಬ್ಯಾಂಕಿಗೆ ಗ್ರಾಹಕರೇ ಜೀವಾಳ. ಗ್ರಾಹಕರಿಲ್ಲದಿದ್ದರೆ ಸಿಬ್ಬಂದಿಯೇ ಇಲ್ಲ. ಇದನ್ನರಿತು ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಸಿಬ್ಬಂದಿ ಗ್ರಾಹಕರೊಂದಿಗೆ ಗೌರಯುತವಾಗಿ, ಸೌಜನ್ಯವಾಗಿ ವರ್ತಿಸಬೇಕು.

ಸಹಕಾರ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ ಬ್ಯಾಂಕಿಗೆ, ತಮಗೂ ಒಳ್ಳೆಯ ಹೆಸರು ತಂದುಕೊಡಬೇಕು. ವಿನಾಕಾರಣ ಯಾವುದೇ ತಂಟೆ, ತಕರಾರು ಆಗದಂತೆ ಜಾಗೃತಿವಹಿಸಬೇಕು ಎಂದರು. 

      ಹಿಂದೆ ಬೈಲಹೊಂಗಲ ಶಾಖೆಯಿಂದ ಹಲವಾರು ಕೋಟಿ ವ್ಯವಹಾರಗಳು ನಡೆಯುತ್ತಿದ್ದವು. ಅದನ್ನು ಮರು ಸ್ಥಾಪಿಸಲು ಕ್ರಮ ಕೈಕೊಳ್ಳಬೇಕು. ಶಾಖೆಯ ಏನೇ ಕುಂದು, ಕೊರತೆಗಳಿದ್ದರೆ ಗ್ರಾಹಕರು, ಸಿಬ್ಬಂದಿ ನನ್ನನ್ನು ಸಂಪರ್ಕಿಸಿದರೆ ತಕ್ಷಣ ಕ್ರಮ ಕೈಕೊಳ್ಳುವುದಾಗಿ ತಿಳಿಸಿದರು. 

ಸಿಬ್ಬಂದಿ ಮೇಲೆ ದೂರು ಬಂದರೆ ನಿರ್ಧಾಕ್ಷ್ಯಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು.