ಫ್ರೆಂಚ್ ಅಥ್ಲೆಟಿಕ್ಸ್ ಕೂಟ: ಚಿನ್ನ ಗೆದ್ದ ಚೋಪ್ರ


ನವದೆಹಲಿಫ್ರಾನ್ಸ್ ನಲ್ಲಿ ನಡೆಯುತ್ತಿರುವ ಸೊಟೆವಿಲ್ಲೆ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

2012 ಲ್ಲಿ ಲಂಡನ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕೆಶೋರ್ನ್ ವಾಲ್ಕಾಟ್ ಅವರಂತಹ ಘಟಾನುಘಟಿ ಆಟಗಾರರಿಗೆ ಪೈಪೋಟಿ ನೀಡಿ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ. ನೀರಜ್ ಚೋಪ್ರಾ 85.17 ಮೀಟರ್ ನಷ್ಟು ದೂರ ಥ್ರೋ ಮಾಡಿದ್ದರೆ, ಆಂಡ್ರಿಯನ್ ಮಾರ್ಡೆರೆ (81.48 ಮೀಟರ್) ಹಾಗೂ ಲಿಥುವೇನಿಯದ ಎಡಿಸ್ ಮ್ಯಾಟುಸೆವಿಶಿಯಸ್ (79.31 ಮೀಟರ್) ನಷ್ಟು ದೂರ ಎಸೆದಿದ್ದು ಚೋಪ್ರಾ ನಂತರದ ಎರಡು ಸ್ಥಾನಗಳನ್ನು ಪಡೆದಿದ್ದಾರೆ.

2016 ರಲ್ಲಿ ವಿಶ್ವ ಜ್ಯೂನಿಯರ್ ಚಾಂಪಿಯನ್ ಶಿಪ್ ನಲ್ಲಿ 86.48 ಮೀಟರ್ ದೂರ ಥ್ರೋ ಮಾಡಿದ್ದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. ಯುವ ಕ್ರೀಡಾಪಟುವಿನ ಸಾಧನೆಗೆ ಅಭಿನಂದನೆ ಸಲ್ಲಿಸಿರುವ ಎಎಫ್ಐ ಅಧ್ಯಕ್ಷ, ನೀರಜ್ ಅವರನ್ನು ಅವರ ಕೋಚ್ ಜೊತೆಗೆ ಫಿನ್ಲ್ಯಾಂಡ್ ಗೆ ಹೆಚ್ಚಿನ ತರಬೇತಿಗಾಗಿ ಕಳಿಸಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ (ಎಎಫ್ಐ) ಶಿಫಾರಸ್ಸಿಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.