ನವದೆಹಲಿ, ಮೇ 20, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಆಯುಷ್ಮಾನ್ ಭಾರತ್ ಯೋಜನೆ’ ಯಡಿ ಈವರೆಗೆ ೧ ಕೋಟಿಗೂ ಹೆಚ್ಚು ಬಡವರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಬಡವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ಕಲ್ಪಿಸಲಾಗುತ್ತಿದ್ದು, ಈ ಯೋಜನೆಯಡಿ ೫ ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಬಹುದಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ಸಂಖ್ಯೆ ೧ ಕೋಟಿ ಗಡಿ ದಾಟಿರುವುದು ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂತಹ ವಿಷಯವಾಗಿದೆ. ಕೇವಲ ೧೯ ತಿಂಗಳ ಅವಧಿಯಲ್ಲಿ ಈ ಯೋಜನೆ ದೇಶದ ಬಹಳಷ್ಟು ಜನರ ಮೇಲೆ ಧನಾತ್ಮಕ ಪರಿಣಾಮ ಉಂಟುಮಾಡಿದೆ. ಯೋಜನೆಯ ಎಲ್ಲಾ ಫಲಾನುಭವಿಗಳು ಮತ್ತು ಅವರ ಕುಟುಂಬಗಳನ್ನು ಅಭಿನಂದಿಸಿ, ಅವರ ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುವೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.ಆಯುಷ್ಮಾನ್ ಭಾರತ್ ಯೋಜನೆಯ ಯಶಸ್ಸಿಗೆ ಕಾರಣಕರ್ತರಾಗಿರುವ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಎಲ್ಲರ ಶ್ರಮವನ್ನು ಪ್ರಶಂಸಿಸುತ್ತೇನೆ. ಅವರ ಈ ಶ್ರಮ ವಿಶ್ವದ ಅತಿದೊಡ್ಡ ಆರೋಗ್ಯ ಕಾರ್ಯಕ್ರಮವಾಗುವಂತೆ ಮಾಡಿವೆ. ಈ ಯೋಜನೆ ವಿಶೇಷವಾಗಿ ಬಡವರ ಮತ್ತು ದಲಿತರ ವಿಶ್ವಾಸವನ್ನು ವೃದ್ದಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.