ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ  Free health check-up camp for senior citizens

ಲೋಕದರ್ಶನ ವರದಿ 

ಬೆಳಗಾವಿ 14 : ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಚಾರಿಟೆಬಲ್ ಆಸ್ಪತ್ರೆ ಹಾಗೂ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.  

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜೆ.ಎನ್‌. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಜೇಶ ಪವಾರ್, ವಯೋವೃದ್ಧರು ವಿವಿಧ ಆರೋಗ್ಯ ಸಮಸ್ಯೆಗಳ ಜೊತೆಗೆ ಒಂಟಿತನ, ಆರ್ಥಿಕ ತೊಂದರೆ ಹಾಗೂ ಮಾನಸಿಕ ಒತ್ತಡ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಆದ್ದರಿಂದ ಅವರಿಗೆ ಸೂಕ್ತ ಚಿಕಿತ್ಸೆ, ಪ್ರೀತಿ ಹಾಗೂ ಕಾಳಜಿಯ ಅಗತ್ಯವಿದೆ ಎಂದು ಹೇಳಿದರು.  

ಹಿರಿಯ ವೈದ್ಯರಾದ ಡಾ. ವಿ.ಡಿ. ಪಾಟೀಲ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಹಿರಿಯ ನಾಗರಿಕರ ಆರೋಗ್ಯಕ್ಕೆ ಮಹತ್ವದ ಪಾತ್ರವಿದೆ. ಹಿರಿಯರ ಸೇವೆ ಹಾಗೂ ಆರೈಕೆಗೆ ಆಸ್ಪತ್ರೆ ಸದಾ ಬದ್ಧವಾಗಿದೆ ಎಂದರು.  

ಶಿಬಿರದಲ್ಲಿ ಇಸಿಜಿ, ರಕ್ತ ಪರೀಕ್ಷೆ, ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ವೈದ್ಯಕೀಯ, ಕಿವಿ-ಮೂಗು-ಗಂಟಲು (ಇಎನ್ಟಿ), ಫಿಸಿಯೋಥೆರಪಿ, ನರರೋಗ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಆರೋಗ್ಯ ಸಲಹೆ ನೀಡಿದರು. 225ಕ್ಕೂ ಹೆಚ್ಚು ಹಿರಿಯ ನಾಗರಿಕರು ಶಿಬಿರದ ಪ್ರಯೋಜನ ಪಡೆದರು.  

ಇದೇ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಜೆರಿಯಾಟ್ರಿಕ್ ಮೆಡಿಸಿನ್ (ಹಿರಿಯ ನಾಗರಿಕರ ವೈದ್ಯಕೀಯ) ವಿಭಾಗವನ್ನು ಆರಂಭಿಸಲಾಗಿದೆ. ಪ್ರೊ. ಡಾ. ಅಂಜಲಿ ಆರ್‌. ಮೆಟಗುಡಮಠ ಅವರ ನೇತೃತ್ವದಲ್ಲಿ ವಿಭಾಗ ಕಾರ್ಯನಿರ್ವಹಿಸುತ್ತಿದೆ.  

ಆಸ್ಪತ್ರೆಯ ಒಪಿಡಿ ಸಂಖ್ಯೆ 25ರಲ್ಲಿ ಸೋಮವಾರದಿಂದ ಶನಿವಾರದವರೆಗೆ ಜೆರಿಯಾಟ್ರಿಕ್ ಮೆಡಿಸಿನ್ ಸೇವೆಗಳು ಲಭ್ಯವಿರಲಿವೆ. ಹಿರಿಯ ನಾಗರಿಕರಲ್ಲಿ ಆರೋಗ್ಯಕರ ವೃದ್ಧಾಪ್ಯವನ್ನು ಉತ್ತೇಜಿಸುವುದು, ಸ್ವಾವಲಂಬಿ ಜೀವನಶೈಲಿಗೆ ಬೆಂಬಲ ನೀಡುವುದು ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸುವುದು ವಿಭಾಗದ ಪ್ರಮುಖ ಉದ್ದೇಶವಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.