ಪೊಲೀಸ್ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್; ಜಿಲ್ಲೆಯನ್ನು ದುಶ್ಚಟ, ಅಪರಾಧಮುಕ್ತ ಜಿಲ್ಲೆ ಮಾಡುವಲ್ಲಿ ಕ್ರಮವಹಿಸಿ: ಸಚಿವ ಲಾಡ್

ಪೊಲೀಸ್ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್; ಜಿಲ್ಲೆಯನ್ನು ದುಶ್ಚಟ, ಅಪರಾಧಮುಕ್ತ ಜಿಲ್ಲೆ ಮಾಡುವಲ್ಲಿ ಕ್ರಮವಹಿಸಿ: ಸಚಿವ ಲಾಡ್ Free hand to police officers; take action to make the district a crime-free district: Minister Lad

ಲೋಕದರ್ಶನ ವರದಿ 

ಧಾರವಾಡ, ಮೇ.14: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಮಾಡಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ, ಅದಕ್ಕೆ ಕುಮ್ಮಕ್ಕು ನೀಡುವ ಮತ್ತು ಡ್ರಗ್ಸ್‌, ಗಾಂಜಾ, ಅಫೀಮು ಪ್ರಕರಣಗಳಲ್ಲಿ ಸಿಗುವ ವ್ಯಕ್ತಿಗಳಿಗೆ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಧಾರವಾಡ ಜಿಲ್ಲೆಯನ್ನು ಡ್ರಗ್ಸ್‌, ಗಾಂಜಾ ಮತ್ತು ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲ ಹಂತದ ಪೊಲೀಸ್ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಕಾರ್ಮಿಕ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್‌.ಲಾಡ್ ಅವರು ಹೇಳಿದರು. ಅವರು ನಿನ್ನೆ (ಮೇ.13) ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ಹಾಗೂ ಮಹಾನಗರ ಪೊಲೀಸ್ ಇಲಾಖೆ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಮಾತನಾಡಿದರು. 

ಕಳೆದ ಐದಾರು ತಿಂಗಳಿಂದ ಅಪರಾಧಗಳ ಸಂಖ್ಯೆ ಕಡಿಮೆ ಆಗಿದ್ದರೂ ಸಂಪೂರ್ಣ ನಿಯಂತ್ರಣವಾಗುತ್ತಿಲ್ಲ. ಡ್ರಗ್ಸ್‌, ಗಾಂಜಾ ಸೇವನೆ, ಮಾರಾಟ ಕಡಿಮೆ ಆಗಿದ್ದರೂ ಸಂಪೂರ್ಣ ನಿಲ್ಲುತ್ತಿಲ್ಲ. ಕೆಳಮಟ್ಟದಿಂದ ಪೊಲೀಸ್ ಅಧಿಕಾರಿಗಳು ಪ್ರತಿ ಪ್ರಕರಣವನ್ನು ಕೂಲಂಕುಷವಾಗಿ ಪರೀಶೀಲಿಸಿ, ತನಿಖೆ ಮಾಡಿ, ನಿಜವಾದ ಅಪರಾಧಿಗಳ ಮೇಲೆ ಕ್ರಮ ಜರುಗಿಸಬೇಕು. ಅಪರಾಧಿ ಕೃತ್ಯದ ಮನೊಭಾವದವರಿಗೆ ಪೊಲೀಸ್ ಖದರು ತೋರಿಸಿ, ನಿಯಮಾನುಸಾರ ಕಾನೂನು ಕ್ರಮ ಜರುಗಿಸಿ ಎಂದು ಸಚಿವರು ತಿಳಿಸಿದರು. 

ಕಾಲೇಜು, ಸಾರ್ವಜನಿಕ ಸ್ಥಳ ಹಾಗೂ ಗ್ರಾಮ, ಪಟ್ಟಣ ಪ್ರದೇಶಗಳಲ್ಲಿ ಅಪರಾಧಿ ಡ್ರಗ್ಸ್‌, ಗಾಂಜಾ ಅಂತಹ ಅಫೀಮುಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಾಲಾ, ಕಾಲೇಜು ಶಿಕ್ಷಕರನ್ನು, ಸಮಾಜದ ಗಣ್ಯ ವ್ಯಕ್ತಿಗಳನ್ನು, ಜನಾಭಿಪ್ರಾಯ ರೂಪಿಸುವವರನ್ನು ಅಪರಾಧಮುಕ್ತ ಜಿಲ್ಲೆ ಮಾಡುವ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು. 

ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರು ಮತ್ತು ಠಾಣಾ, ವೃತ್ತ ಮಟ್ಟದ ಅಧಿಕಾರಿಗಳು ರಾತ್ರಿ ವೇಳೆ ಜಿಲ್ಲೆಯಲ್ಲಿ ಸಂಚರಿಸಿ, ಅನೀರೀಕ್ಷಿತ ಭೇಟಿ ನೀಡಿ, ಶಾಂತಿ, ಕಾನೂನು ಸುವ್ಯವಸ್ಥೆ ಪರೀಶೀಲಿಸಬೇಕು. ಪ್ರತಿ ತಿಂಗಳು ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಎಸ್‌.ಪಿ. ಅವರು ಖುದ್ದು ಪರೀಶೀಲಿಸಿ ತಮಗೆ ವರದಿ ಸಲ್ಲಿಸಬೇಕೆಂದು ಅವರು ಹೇಳಿದರು. ಧಾರವಾಡ ಜಿಲ್ಲೆಯು ವಿದ್ಯಾವಂತರ ನಾಡು, ಸಾಂಸ್ಕೃತಿಕ ಬಿಡು, ಸಾಹಿತ್ಯ, ಸಂಸ್ಕೃತಿಯ ನೆಲ ಎಂಬುದು ಮರುಕಳಿಸುವಂತೆ ನಾವೇಲ್ಲರೂ ಕೆಲಸ ಮಾಡುವ ಅಗತ್ಯವಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಸಿ, ಜಿಲ್ಲಾಡಳಿತ ಕಾರ್ಯೋನ್ಮುಖವಾಗಬೇಕು ಎಂದು ಸಚಿವರು ಸಲಹೆ ನೀಡಿದರು.  

ಅಪರಾಧಿಗಳು, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗವಹಿಸುವವರು, ಶಾಂತಿ, ಸುವ್ಯಸ್ಥೆಗೆ ದಕ್ಕೆ ತರುವವರ ಮೇಲೆ ಮುಲಾಜು ಇಲ್ಲದೆ ಕ್ರಮಕೈಗೊಳ್ಳಿ. ಯಾರ ಶಿಫಾರಸ್ಸು, ಒತ್ತಡಗಳಿಗೆ ಒಳಗಾಗದೇ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳಿ. ಧಾರವಾಡ ಜಿಲ್ಲೆ ಆದಷ್ಟು ಬೇಗನೆ ಡ್ರಗ್ಸ್‌, ಗಾಂಜಾ ಹಾಗೂ ಅಪರಾಧ ಮುಕ್ತ ಜಿಲ್ಲೆಯಾಗಿ ರೂಪಗೊಳ್ಳಬೇಕು. ಇದಕ್ಕೆ ನಾನು ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ, ಜನಪ್ರತಿನಿಧಿಗಳ ಸಹಕಾರ, ಮಾರ್ಗದರ್ಶನ ಇರುತ್ತದೆ ಎಂದು ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ತಿಳಿಸಿದರು.