ಸಹಕಾರ ಸಂಸ್ಥೆಗಳ ಮೇಲಿನ ಟಿಡಿಎಸ್, ಜಿಎಸ್ಟಿಯಿಂದ ಮುಕ್ತಗೊಳಿಸಿ

ಲೋಕದರ್ಶನ ವರದಿ

ಬೈಲಹೊಂಗಲ 04: ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್ಟಿಯಿಂದ ಮುಕ್ತಗೊಳಿಸಬೇಕೆಂದು  ಒತ್ತಾಯಿಸಿ ಡಿಸೆಂಬರ 13 ರಂದು ರಾಜ್ಯಾದ್ಯಂತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗವುದು ಎಂದು ಕರ್ನಾಟಕ ಸ್ಟೇಟ್ ಕೋ- ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ ಅಧ್ಯಕ್ಷ ವೈ.ಕುಮಾರ ಹೇಳಿದರು.

      ಅವರು ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಹಕಾರಿ ಕ್ಷೇತ್ರ ಈ ದೇಶದ ಕೃಷಿಕರ ಮಧ್ಯಮ ವರ್ಗ, ಕಡುಬಡವರಿಗೆ ಸೇವೆ ನೀಡುವ ಕ್ಷೇತ್ರವಾಗಿದೆ.  ಈ ಸಂಸ್ಥೆಯು ನೂರಾರು ವರ್ಷಗಳ ಇತಿಹಾಸ ಹೊಂದಿದ್ದು ಈ ದೇಶದ ಆರ್ಥಿಕ ವ್ಯವಸ್ಥೆಗೆ ಅತ್ಯಮೂಲ್ಯವಾದ ಕೊಡುಗೆ ನೀಡುತ್ತಾ ಬಂದಿದೆ. ಇತ್ತಿಚೆಗೆ ಕೇಂದ್ರ ಸರಕಾರ ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್ಟಿ ವಿಧಿಸಿರುವುದು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ  ತೊಡಕನ್ನುಂಟು ಮಾಡಿದೆ. ಟಿಡಿಎಸ್ ವಿಧಿಸುವದರಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 52 ಸಾವಿರಕ್ಕೂ ಹೆಚ್ಚು ಸಹಕಾರ ಕ್ಷೇತ್ರಗಳ ಅಭಿವೃದ್ದಿಗೆ ಮಾರಕವಾಗಿ ಪರಿಣಮಿಸಿದೆ. ಈ ಕ್ಷೇತ್ರದಲ್ಲಿ ಕೋಟ್ಯಾಂತರ ಜನರು ಸದಸ್ಯತ್ವ ಪಡೆದಿದ್ದು ಲಕ್ಷಾಂತರ ಉದ್ಯೋಗ ಅವಕಾಶ ನೀಡಿದೆ ಎಂದರು. 

      ಈ ಹಿನ್ನೆಲೆಯಲ್ಲಿ ಸಹಕಾರ ಕ್ಷೇತ್ರ ಉಳಿಸಿ ಬೆಳೆಸುವ ದೃಷ್ಟಿಯಿಂದ ಸಹಕಾರಿ ತತ್ವದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್ಟಿ ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

   ಸಹಕಾರಿ ಕ್ಷೇತ್ರದಲ್ಲಿ ಹಲವಾರು ರಾಜಕೀಯ ಮುಖಂಡರು ತಮ್ಮ ಉಜ್ವಲ ರಾಜಕೀಯ ಭವಿಷ್ಯವನ್ನು ರೂಪಿಸಿಕೊಂಡು ನಂತರ ಸಹಕಾರಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚಕಾರ ಶಬ್ದ ಎತ್ತದಿರುವುದು  ವಿಪರ್ಯಾಸದ ಸಂಗತಿಯಾಗಿದೆ ಎಂದರು. 

   ಇದನ್ನು ಪ್ರತಿಭಟಿಸಿ ಡಿಸೆಂಬರ 13 ರಂದು ರಾಜ್ಯಾದ್ಯಾಂತ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಸಹಕಾರ ಸಂಸ್ಥೆ ಬಂದ್ ಮಾಡಿ ಬೃಹತ ಪ್ರತಿಭಟನೆ ಮೂಲಕ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಗುವುದು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. 

ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಜನಾಂದೋಲನ ರೂಪಿಸಲು ಸನ್ನದ್ದರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಡಾ.ಆರ್.ಬಿ.ಪಾಟೀಲ ಮಾತನಾಡಿ, ಕನರ್ಾಟಕ ಹಾಲು ಒಕ್ಕೂಟ ಮಂಡಳದ ಇತಿಹಾಸದಲ್ಲಿ ಒಬ್ಬ ಎಂ.ಡಿ.ಕೂಡ ಉತ್ತರ ಕರ್ನಾಟಕ ಭಾಗದವರು ಆಗಿಲ್ಲ.  ರಾಜ್ಯದ ಸಹಕಾರಿ ಸಂಸ್ಥೆಗಳಲ್ಲಿ ಅರ್ಧದಷ್ಟು ಸಂಸ್ಥೆಗಳು ಬೆಳಗಾವಿಯ ವಿಭಾಗ ಮಟ್ಟದಲ್ಲಿವೆ ಆದ್ದರಿಂದ ಕರ್ನಾಟಕ ಸ್ಟೇಟ್ ಕೋ- ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ ವಿಭಾಗೀಯ ಕಚೇರಿಯನ್ನು ಪ್ರಾರಂಭಿಸಿ ಬೆಳಗಾವಿ, ವಿಜಯಪುರ, ಧಾರವಾಡ, ಬಾಗಲಕೋಟ ಭಾಗದ ಜಿಲ್ಲಾ ಪ್ರತಿನಿಧಿಯಾಗಿ ನೇಮಿಸಬೇಕು ಎಂದು ಒತ್ತಾಯಿಸಿದಾಗ, ಇದಕ್ಕೆ ಸ್ಪಂದಿಸಿದ ಅಧ್ಯಕ್ಷ ವೈ.ಕುಮಾರ ಏಪ್ರಿಲ್ದಲ್ಲಿ ವಿಭಾಗೀಯ ಕಚೇರಿ ಪ್ರಾರಂಭಿಸಿ ಜಿಲ್ಲಾ ಪ್ರತಿನಿಧಿ ನೇಮಕ ಮಾಡಿ ಸ್ಥಳೀಯರಿಗೆ ಅದ್ಯತೆ  ನೀಡಲಾಗುವುದು ಎಂದರು.

   ಗೋಷ್ಠಿಯಲ್ಲಿ  ಶ್ರೀಶೈಲ ಅಬ್ಬಾಯಿ, ಎಫ್.ಎಸ್.ಸಿದ್ದನಗೌಡರ, ದುಂಡೇಶ ಗರಗದ, ಮಲ್ಲಯ್ಯ ರುದ್ರಾಪುರ, ಎಂ.ಕೆ.ಸರದಾರ, ಎಂ.ಕೆ.ಕುಂಬಾರ,  ಆಶಿಷ ಕಣಗಲೆ, ರಾಯಪ್ಪ ಸಂಗೊಳ್ಳಿ, ಫಕ್ರಸಾಬ ಹಳೇಮನಿ, ಎಸ್.ಎಸ್.ಗೊರವರ, ಎಸ್.ಡಿ.ಬೂದಿಹಾಳ,  ಮಲ್ಲಿಕಾರ್ಜುನ ಗೌರಿ, ಕೃಷ್ಣಮೂತರ್ಿ, ಡಿ.ಆಯ್.ನದಾಫ ಮತ್ತಿತರರು ಇದ್ದರು.