ತಾಳಿಕೋಟಿ 16: ಕಣ್ಣುಗಳು ನಮ್ಮ ದೇಹದ ಅತ್ಯಮೂಲ್ಯ ಅಂಗವಾಗಿವೆ. ನಾವು ಎಷ್ಟೇ ಶಕ್ತಿವಂತರು, ಜಾಣವಂತರಾಗಿರಲಿ ನಮ್ಮ ಕೆಲಸಗಳನ್ನು ನಿಖರವಾಗಿ ಮಾಡಬೇಕೆಂದರೆ ನಮ್ಮ ಕಣ್ಣುಗಳು ಸರಿಯಾಗಿರಬೇಕು, ಎಷ್ಟೇ ಆರೋಗ್ಯವಂತನಾಗಿರಲಿ ಕಣ್ಣು ಕಾಣದಿದ್ದರೆ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಗುತ್ತದೆ. ಕಣ್ಣಿದ್ದರೆ ಮಾತ್ರ ಜಗತ್ತು ಇಲ್ಲದಿದ್ದರೆ ಎಲ್ಲವೂ ಶೂನ್ಯ ಇವುಗಳ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಗ್ರಾಮಸ್ಥರಿಗೆ ಸಲಹೆ ನೀಡಿದರು.
ತಾಲೂಕಿನ ಬಿಳೆಭಾವಿ ಗ್ರಾಮದಲ್ಲಿ ಶ್ರೀ ಗ್ರಾಮ ದೇವತೆ ಹಾಗೂ ಶ್ರೀ ಭಾಗ್ಯಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಇಂತಹ ಉಚಿತ ಶಿಬಿರಗಳಿಂದ ಗ್ರಾಮೀಣ ಭಾಗದ ಬಡವರಿಗೆ ಹೆಚ್ಚು ಅನುಕೂಲವಾಗುತ್ತದೆ. 15 ರಿಂದ 20 ಸಾವಿರ ಹಣಕೊಟ್ಟು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಇಂಥವರಿಗೆ ನಾವು ನಮ್ಮ ಅನುಗ್ರಹ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಿ ಮರಳಿ ಅವರ ಗ್ರಾಮಗಳಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡುತ್ತಾರೆ ಹೇಗೆ ಮಾಡುತ್ತಾರೋ ಎಂದು ಚಿಂತಿಸಬೇಕಾಗಿಲ್ಲ, ಶಸ್ತ್ರಚಿಕಿತ್ಸೆ ನಂತರ ನಿಮ್ಮ ನಿಧನದ ನಂತರವೂ ನಿಮ್ಮ ಕಣ್ಣುಗಳನ್ನು ಬೇರೆಯವರಿಗೆ ದಾನ ಮಾಡಬಹುದಾದ ರೀತಿಯಲ್ಲಿ ಮಾಡಲಾಗುವುದು ಆದ್ದರಿಂದ ಗ್ರಾಮಸ್ಥರು ಈ ಶಿಬಿರದ ಸದುಪಯೋಗವನ್ನು ಮಾಡಿಕೊಳ್ಳಿ ಎಂದರು.
ಈ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 150 ಜನರು ತಪಾಸಣೆ ಮಾಡಿಸಿಕೊಂಡರು ಇದರಲ್ಲಿ 30 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬಿಳೆಭಾವಿ ಗ್ರಾಮಸ್ಥರು ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಅವರನ್ನು ಸನ್ಮಾನಿಸಿದರು.ಸಿದ್ದಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.ಗ್ರಾಮದ ಗಣ್ಯರಾದ ಸಿದ್ದನಗೌಡ ಮಾಳಿ,ಮುತ್ತು ಮಾಳಿ, ನಿಂಗಣ್ಣ ಕೆಸರಟ್ಟಿ,ಚೆನ್ನಪ್ಪ ಕಾರಗನೂರ, ಶಾಂತಪ್ಪ ಇಣಚಗಲ್,ಶಿಕ್ಷಕ ಎಸ್.ಎನ್.ಕಡಕಲ್, ಬಸವರಾಜ ಅರಸನಾಳ,ಶಾಂತು ಹೊಸಕೇರಿ, ಮಲ್ಲನಗೌಡ ಮಾಳಿ, ಚಂದಪ್ಪ ಮಿಣಜಗಿ,ಹಣಮಂತರಾಯ ಮೇಟಿ,ಮಾಳಪ್ಪ,ಸಂಗಣ್ಣ ಹೆಮ್ಮಡಗಿ, ಲಕ್ಷ್ಮಿಕಾಂತ್ ಬಡಿಗೇರ, ಮಲ್ಲಯ್ಯ ಕೆಸರಟ್ಟಿ, ಮೋನಯ್ಯ ಕಟ್ಟಿಮನಿ ಅನುಗ್ರಹ ಕಣ್ಣಿನ ಆಸ್ಪತ್ರೆ ಸಿಬ್ಬಂದಿಗಳಾದ ಜುನೇದ ನದಾಫ,ವಾಗೇಶ,ನಿಹಾಲ್, ಬಾಪುರಾಯ,ಈರ್ಪ, ಮಣಿಕಂಠ ಹಾಗೂ ಪ್ರದೀಪ ಇದ್ದರು.