ರಾಮನಗರ: ಕೇವಲ ಸರ್ಕಾರಿ ಶಾಲಾ ಕಾಲೇಜ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.
ಇಂದು ರಾಮನಗರ ಜಿಲ್ಲೆಯ ಚೆನ್ನಪಟ್ಟಣದಲ್ಲಿ ಜೆಡಿಎಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಲಕ್ಷಾಂತರ ರುಪಾಯಿ ಡೊನೇಷನ್ ಕೊಟ್ಟು ಖಾಸಗಿ ಶಾಲೆ ಮತ್ತು ಕಾಲೇಜ್ ಗಳಿಗೆ ಸೇರುವ ಮಕ್ಕಳಿಗೆ ಉಚಿತ ಬಸ್ ಪಾಸ್ ಅಗತ್ಯ ಇಲ್ಲ. ಬಿಜೆಪಿಯವರು ಎಬಿವಿಪಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಬೇಡ. ನನಗೆ ಅವರಿಗಿಂತ ಚೆನ್ನಾಗಿ ರಾಜಕೀಯ ಮಾಡಲು ಬರುತ್ತದೆ ಎಂದರು.
ಇದೇ ವೇಳೆ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಟಿವಿ ವಾಹಿನಿಗಳು ಸಣ್ಣ ಪುಟ್ಟ ಘಟನೆಯನ್ನೇ ಮುಂದಿಟ್ಟುಕೊಂಡು ನನ್ನನ್ನು ಹಣಿಯುತ್ತಿವೆ. ನಿಮೆಗೆ ಪತ್ರಿಕಾ ಧರ್ಮ ಇದೆಯೇ? ಎಂದು ಪ್ರಶ್ನಿಸಿದರು.
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿತ್ತು. ಆದರೆ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡುವುದಾಗಿ ನಾನು ಭರವಸೆ ನೀಡಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದರು.