ಲೋಕದರ್ಶನ ವರದಿ
ಕಮಲಾಪುರ 25:ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಯುವಕರು ಮುಂದೆ ಬರಬೇಕು ಎಂದು ವಿಜಯನಗರ ಯುವಕರ ಬಳಗದ ಸೋಮಶೇಖರ್ ನಾಯಕ ತಿಳಿಸಿದರು.
ಗಂಡುಗಲಿ ಕುಮಾರರಾಮ ಯುವಸೇನೆಯ ನೆರವಿನೊಂದಿಗೆ ಪಟ್ಟಣದ ಊರಮ್ಮನಗುಡಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಉಚಿತ ಬೃಹತ್ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರದಲ್ಲಿ ಪ್ರಾಸ್ತವಿಕ ನುಡಿಗಳನ್ನಾಡಿ, ಪ್ರತಿಯೊಂದು ಗ್ರಾಮ, ಪಟ್ಟಣ, ನಗರಗಳಲ್ಲಿ ಯುವಕರು ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಇದರಿಂದ ಅನೇಕ ರೋಗಿಗಳಿಗೆ ನೆರವು ದೊರತಂತಾಗುತ್ತದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷಗಳಿಂದ ಪ್ರತಿ ತಿಂಗಳು ಒಂದೊಂದು ಗ್ರಾಮ ಆಯ್ಕೆ ಮಾಡಿಕೊಂಡು ಆರೋಗ್ಯ ಶಿಬಿರಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಇದಕ್ಕೆ ಎಲ್ಲಾ ಗ್ರಾಮಗಳ ಜನರ ಸ್ಪಂಧನೆ ಹಾಗೂ ಸಹಕಾರ ಸಿಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವೈದ್ಯಾಧಿಕಾರಿ ಒ.ಎಂ. ಪವನ್ ಕುಮಾರ್ ಮಾತನಾಡಿ, ಇಂತಹ ಶಿಬಿರಗಳಿಂದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಅನುಕೂಲಕರವಾಗಲಿದೆ. ನಮ್ಮ ಇಲಾಖೆಯು ಇಂತಹ ಶಿಬಿರಗಳಿಗೆ ಪ್ರೋತ್ಸಾಹದಾಯಕವಾಗಿ ನಿಲ್ಲಲಿದೆ. ಮತ್ತು ಸಾಧ್ಯವಾದಷ್ಟು ವೈದ್ಯಕೀಯ ನೆರವನ್ನು ಸಹ ನೀಡಲಿದೆ. ಹಳ್ಳಿಗಳಲ್ಲಿ ಇಂತಹ ಶಿಬಿರಗಳು ಹೆಚ್ಚಾಗಬೇಕಿವೆ ಎಂದರು.
ಎಸ್.ಡಿ.ಎಂ. ಧಾರವಾಡದ ಹೃದಯತಜ್ಞ ಮಹೇಶ್ ಹೊನ್ನಳ್ಳಿ, ನರ ಮತ್ತು ಮಾನಸಿಕ ತಜ್ಞ ಶ್ರೀನಿವಾಸ ಟಿ.ಆರ್., ನೇತ್ರತಜ್ಞ ಶ್ರೀನಿವಾಸ ವಿ. ದೇಶಪಾಂಡೆ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ನ ವೈದ್ಯರು, ಹೆರಿಗೆ ತಜ್ಞ ಚಾಮರಾಜ್, ಮಕ್ಕಳ ತಜ್ಞ ಉದಯ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ನಡೆಸಿದರು.
ಶಿಬಿರದಲ್ಲಿ ಸುಮಾರು 2000 ಫಲಾನುಭವಿಗಳು ಪಾಲ್ಗೊಂಡಿದ್ದರು. ಇವರಲ್ಲಿ ನೇತ್ರ ಚಿಕಿತ್ಸೆಗಾಗಿ 278 ಫಲಾನುಭವಿಗಳ ಪೈಕಿ 56 ಫಲಾನುಭವಿಗಳ ಪೈಕಿ 26 ಫಲಾನುಭವಿಗಳಿಗೆ ಮೊದಲನೆಯ ಹಂತವಾಗಿ ಶಸ್ತ್ರಚಿಕಿತ್ಸೆಯನ್ನು ಜ.24ರಂದು ನೆರವೇರಿಸಲಾಯಿತು. ಉಳಿದ 30 ಜನ ಫಲಾನುಭವಿಗಳಿಗೆ ಜ.31 ರಂದು ಶಸ್ತ್ರಿ ಚಿಕಿತ್ಸೆ ನೆರವೇರಿಸಲಾಗುವುದು ಎಂದು ಅಶ್ವಿನಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಧಾರವಾಡದ ಎಸ್.ಡಿ.ಎಂ. ಹೃದಯ ವಿಭಾಗಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ 17 ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಜ.28 ರಂದು ಎನ್ಜಿಯೋಗ್ರಾಂ ಮಾಡಲಾಗುವುದು ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ನರ ಮತ್ತು ಮಾನಸಿಕ ತಜ್ಞರಾದ ಶ್ರೀನಿವಾಸ ಟಿ.ಆರ್., ಸುಮಾರು 600ಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಉಚಿತ ಮಾತ್ರೆ ಮತ್ತು ಔಷಧಿಗಳನ್ನು ನೀಡಿದ್ದು, ಮಾನಸಿಕ ಒತ್ತಡವನ್ನು ಬಿಡಬೇಕು. ಶಾಂತಿ ಮತ್ತು ನೆಮ್ಮದಿಯ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದ್ದಾರೆ. ವಿಜಯನಗರ ಯುವಕರ ಬಳಗದ ಗೌರವಾಧ್ಯಕ್ಷ ಹೆಚ್.ಗುರುರಾಜನಾಯಕ ಶಿಬಿರದ ಪ್ರಾಯೋಜಕತ್ವ ತೆಗೆದುಕೊಂಡಿದ್ದರೆ, ಆಯೋಜಕರಾದ ಭರಮಪ್ಪ ನಾಯಕ, ಧನುಂಜಯ, ಡಿ.ವ್ಯಾಸರಾಜ, ಕೆ.ಪ್ರಶಾಂತ, ಕಾಶಿ ಬಡಿಗೇರ, ಡಿ.ಚಂದ್ರಶೇಖರ್, ಕಾಶಿ ವಿಶ್ವನಾಥ, ರವಿ, ಷಣ್ಮುಖ, ಮಾರೇಶ ಮುಂತಾದವರು ನೇತೃತ್ವವಹಿಸಿದ್ದರು.