ಉಚಿತ ದಂತ ಚಿಕಿತ್ಸಾ ತಪಾಸಣಾ ಶಿಬಿರ

ಉಚಿತ ದಂತ ಚಿಕಿತ್ಸಾ ತಪಾಸಣಾ ಶಿಬಿರ  Free Dental Check-up Camp

ಕೊಪ್ಪಳ, ಆ.25: ಇನ್ನರ್ ವೀಲ್ ಕ್ಲಬ್, ಕೊಪ್ಪಳ ವತಿಯಿಂದ ಕ್ಲಬ್ನ ದತ್ತು ಶಾಲೆಯಾದ ತಾಲ್ಲೂಕಿನ ದದೇಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.  

ಶಿಬಿರದಲ್ಲಿ ದಂತ ವೈದ್ಯೆ ಡಾ. ಹೀನಾ ಅವರು ಶಾಲೆಯ ಎಲ್ಲ ವಿದ್ಯಾರ್ಥಿಗಳ ದಂತ ತಪಾಸಣೆ ನಡೆಸಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಉಚಿತವಾಗಿ ಟೂತ್ಬ್ರಷ್ ಹಾಗೂ ಟೂತ್ಪೇಸ್ಟ್‌ ವಿತರಿಸಿದರು. ಅಲ್ಲದೆ, ಪ್ರತಿ ಶನಿವಾರ ಉಚಿತ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.  

1ರಿಂದ 8ನೇ ತರಗತಿಯವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ದಂತ ಆರೈಕೆ ಕುರಿತು ಮಾಹಿತಿ ನೀಡುವ ಮೂಲಕ ಅವರಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಸಮಾಜಮುಖಿ ಸೇವೆಯ ಮೂಲಕ ಶಿಬಿರ ಆಯೋಜಿಸಿರುವ ಇನ್ನರ್ ವೀಲ್ ಕ್ಲಬ್ನ ಕಾರ್ಯವನ್ನು ಶ್ಲಾಘಿಸಲಾಯಿತು.  

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದಬಾವಿ ಮಾತನಾಡಿ, ಶಿಬಿರ ಯಶಸ್ವಿಯಾಗಿ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಡೆದಿದ್ದು, ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.  

ಕ್ಲಬ್ನ ಹಿರಿಯ ಸದಸ್ಯೆ ರಾಧಾ ಕುಲಕರ್ಣಿ, ಸಂಪಾದಕಿ ಮಾಲಾ, ಐಎಸ್‌ಒ ಲತಾ, ಕಾರ್ಯಕಾರಿ ಸಮಿತಿ ಸದಸ್ಯೆಯರಾದ ಶರಣಮ್ಮ ಪಾಟೀಲ, ಪಾರ್ವತಿ ಪಾಟೀಲ, ಶಾರದಾ ಹಾಗೂ ತ್ರಿಶಾಲಾ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಸಹಕರಿಸಿದರು.  

ಶಿಬಿರ ಯಶಸ್ವಿಗೆ ಶ್ರಮಿಸಿದ ಡಾ. ಹೀನಾ, ಕ್ಲಬ್ ಸದಸ್ಯರು, ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದಕ್ಕೆ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದಬಾವಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.