ಉಚಿತ ಬೈಸಿಕಲ್ ಯೋಜನೆ ಸ್ಥಗಿತಗೊಳಿಸಬಾರದು: ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಹೇಳಿಕೆ

ಬೆಂಗಳೂರು, ಮೇ 22,ಕೋವಿಡ್  19 ರಿಂದ ಹಣಕಾಸು ತೊಂದರೆಯಾದರೂ ಕೂಡ ಉಚಿತ ಬೈಸಿಕಲ್ ವಿತರಣೆ ಯೋಜನೆ  ಸ್ಥಗಿತಗೊಳಿಸದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ನಿರ್ದೇಶನ  ನೀಡಿದ್ದಾರೆ.ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ  ಶಿಕ್ಷಣ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡುವಂತೆ ಇಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ನಿಟ್ಟಿನಲ್ಲಿ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗಳ ಅಭ್ಯರ್ಥಿಗಳಿಗೆ  ತರಬೇತಿ ನೀಡಲಾಗುತ್ತಿದ್ದು, ಗಣಿತ, ವಿಜ್ಞಾನ ಶಿಕ್ಷಕರ ಕೊರತೆ ನೀಗಿಸಲು ಬಿ.ಎಡ್.  ಮಾಡಿರುವ ಇಂಜಿನಿಯರಿಂಗ್ ಪದವೀಧರರ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ  ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಕೇಂದ್ರ  ಸರ್ಕಾರದ ವಿಶೇಷ ನೆರವು ಕೂಡ ಘೋಷಿಸಲಾಗಿದೆ. ಇದರಿಂದು ಮುಂದಿನ ದಿನಗಳಲ್ಲಿ ಕಲ್ಯಾಣ  ಕರ್ನಾಟಕದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗಲಿದೆ ಎಂಬ ಆಶಯ ಸಭೆಯಲ್ಲಿ ವ್ಯಕ್ತವಾಯಿತು.
ಕೋವಿಡ್ ನಿಂದ ಶಿಕ್ಷಣ ಇಲಾಖೆ ಮೇಲೆ ದೊಡ್ಡ ಪರಿಣಾಮವಾಗಿದ್ದು, ಮುಂದಿನ  ದಿನಗಳಲ್ಲಿ ಶಾಲೆಗಳು, ತರಗತಿಗಳನ್ನು ನಡೆಸುವುದು ದೊಡ್ಡಸವಾಲಾಗಿದೆ. ಈ ನಿಟ್ಟಿನಲ್ಲಿ  ಕೋವಿಡ್ ನಂತರ ತರಗತಿಗಳು, ಶಾಲೆಗಳು ಹೇಗಿರಬೇಕು ಎಂಬ ಕುರಿತು ಅಧ್ಯಯನ  ನಡೆಸಲಾಗುತ್ತಿದೆ. ಜೂನ್ 25 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ  ವಹಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್  ಅವರು ಮಾಹಿತಿ ನೀಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ 25 ವಿದ್ಯಾರ್ಥಿಗಳ  ಬದಲಾಗಿ 18 ರಿಂದ 20 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಈ ಬಾರಿ 8  ಸಾವಿರ ಹೆಚ್ಚುವರಿ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಪರೀಕ್ಷಾ ಕೊಠಡಿಗಳ ಫ್ಯೂಮಿಗೇಷನ್ ಮತ್ತು ಸ್ಯಾನಿಟೈಸೇಷನ್ ಮಾಡಲು ಕ್ರಮ  ವಹಿಸಲಾಗುತ್ತಿದೆ. ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯು ಪರೀಕ್ಷಾರ್ಥಿಗಳಳಿಗೆ ಉಚಿತ  ಮಾಸ್ಕ್ ವಿತರಿಸಲಿದ್ದು, ಸಂಸ್ಥೆಯ ಸ್ವಯಂ ಸೇವಕರು ಪರೀಕ್ಷಾ ಕೇಂದ್ರಗಳಲ್ಲಿ  ಅಭ್ಯರ್ಥಿಗಳಿಗೆ ಸ್ಯಾನಿಟೈಸರ್ ಬಳಕೆ ಮಾಡಲು ಹಾಗೂ ಮಾಸ್ಕ್ ಧಾರಣೆಯನ್ನು ಪರಿಶೀಲಿಸಲು  ಸಹಕರಿಸಲಿದ್ದಾರೆ.
ವಲಸೆ ಕಾರ್ಮಿಕರ ಮಕ್ಕಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಸಮಾಜ ಕಲ್ಯಾಣ  ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ  ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು ತಮ್ಮ ಊರಿನಲ್ಲಿಯೇ ಸಮೀಪದ ಪರೀಕ್ಷಾ  ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪುನರ್ ಮನನ ತರಗತಿಗಳನ್ನು ನಡೆಸಲು  ಸಾಧ್ಯವಾಗಿಲ್ಲ.  ಈ ಹಿನ್ನೆಲೆಯಲ್ಲಿ ದೂರದರ್ಶನದಲ್ಲಿ ಪುನರ್ ಮನನ ತರಗತಿಗಳನ್ನು  ನಡೆಸಲಾಗುತ್ತಿದೆ. ಇದಕ್ಕೆ ಅತ್ಯುತ್ತಮ ಸ್ಪಂದನೆ ದೊರೆತಿದೆ. ಇದರಿಂದ ಪ್ರೇರಣೆ ಹೊಂದಿ,  ಪ್ರತ್ಯೇಕ ವಾಹಿನಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಸುದೀರ್ಘ ರಜಾ ಹೊಂದಿರುವ ಶಾಲಾ ಮಕ್ಕಳನ್ನು ಚಟುವಟಿಕೆಗಳ  ಮೂಲಕ ಸಕ್ರಿಯರಾಗಿರಿಸಲು ಪ್ರಾರಂಭಿಸಲಾಗಿರುವ ಮಕ್ಕಳವಾಣಿ ಯೂಟ್ಯೂಬ್ ಚಾನೆಲ್ ಬಗ್ಗೆ  ಪೋಷಕರಿಂದ ಹಾಗೂ ಮಕ್ಕಳಿಂದ ಮೆಚ್ಚುಗೆ ವ್ಯಕ್ತವಾಗಿದೆ.45 ಲಕ್ಷಕ್ಕೂ ಹೆಚ್ಚು ಮಕ್ಕಳು ಈ  ಚಾನೆಲ್ ಅನ್ನು ವೀಕ್ಷಿಸಿದ್ದಾರೆ.ಶಾಲಾ ತರಗತಿಗಳನ್ನು ಮರು ಪ್ರಾರಂಭಿಸುವ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ  ಮಾರ್ಗಸೂಚಿಗಳನ್ನು ನಿರೀಕ್ಷಿಸಲಾಗುತ್ತಿದೆ. ತಜ್ಞರ ಸಮಿತಿ ರಚಿಸಿ, ಪಠ್ಯಕ್ರಮ ನಿಗದಿ  ಪಡಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ.  ಅನುಭವಿ ಶಿಕ್ಷಕರು ಪಾಠ ಮಾಡುವ ವಿಡಿಯೋ ಗಳನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. 45 ಲಕ್ಷ ಮಕ್ಕಳು ಯೂಟ್ಯೂಬ್ ಚಾನೆಲ್ ವೀಕ್ಷಿಸಿದ್ದಾರೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.