ರೆಡ್ಡಿ ಸಮಾಜಕ್ಕೆ ನಿವೇಶನ ನೀಡುವಂತೆ ಟಿ.ವಿ.ಸುದರ್ಶನರೆಡ್ಡಿ ಒತ್ತಾಯ
ಕಂಪ್ಲಿ 19: ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಮಹಾಯೋಗಿ ವೇಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನದೊಂದಿಗೆ ಜಯಂತಿಯನ್ನು ಅರ್ಥಪೂರ್ಣವಾಗಿ ಭಾನುವಾರ ಆಚರಿಸಲಾಯಿತು. ನಂತರ ತಹಶೀಲ್ದಾರ್ ಶಿವರಾಜ ಶಿವಪುರ ಮಾತನಾಡಿ, ಮಾನವತಾವಾದಿ ಮೌಲ್ಯಗಳ ಮೂಲಕ ತನ್ನನ್ನು ತಾನು ಪರಿವರ್ತನೆ ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸಿದ ವೇಮನರ ತತ್ವಾದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ಹೇಳಿದರು.
ನಂತರ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ.ವಿ.ಸುದರ್ಶನರೆಡ್ಡಿ ಮಾತನಾಡಿ, ರೆಡ್ಡಿ ಸಮಾಜವು ಸುಮಾರು 40 ಲಕ್ಷ ಜನಸಂಖ್ಯೆ ಹೊಂದಿದ್ದು, ಸಮಾಜಕ್ಕೆ ವಿಶೇಷ ಯೋಜನೆಗಳನ್ನು ಸರ್ಕಾರ ಕಲ್ಪಿಸಿಕೊಡುವ ಜತೆಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕು. ಮತ್ತು ಕಂಪ್ಲಿಯಲ್ಲಿ ರೆಡ್ಡಿ ಸಮಾಜಕ್ಕೆ ನಿವೇಶನ ನೀಡಬೇಕು ಎಂದರು. ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಸಂಘದ ತಾಲೂಕು ಅಧ್ಯಕ್ಷ ಬಸಲಿಂಗಪ್ಪ ಮಾತನಾಡಿ, ಮಹಾಯೋಗಿ ವೇಮನರು 15 ಮತ್ತು 16ನೇ ಶತಮಾನದಲ್ಲಿ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಮಾನವತಾವಾದಿ ಮೌಲ್ಯಗಳ ಮೂಲಕ ತನ್ನನ್ನು ತಾನು ಪರಿವರ್ತೆನೆ ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ ಅವರ ತತ್ವಗಳು ಮತ್ತು ಚರಿತ್ರೆ ಪಾಲನೆ ಮಾಡಿಕೊಂಡು ಅಂದಿನ ಕಾಲದ ಸ್ಥಿತಿಗತಿಗಳಿಂದ ವೇಮನರು ಮಹಾಯೋಗಿಗಳಾದರು.
ಮಾನವ ಕುಲದ ಏಳಿಗಾಗಿ ಶ್ರಮಿಸಿದವರು ಮಹಾಯೋಗಿ ವೇಮನವರು. ಇಂತಹ ಮಹನೀಯರ ತತ್ವ ಆದರ್ಶಗಳನ್ನು ತಿಳಿದುಕೊಳ್ಳುವುದಷ್ಟೆ ಅಲ್ಲದೇ, ಅವುಗಳನ್ನು ಪಾಲನೆ ಮಾಡುವುದು ಸಹ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರೆಡ್ಡಿ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ, ಮುಖಂಡರಾದ ಇಟಗಿ ಬಸವರಾಜಗೌಡ, ರಾಮಸುಬ್ಬಾರೆಡ್ಡಿ, ಇಟಗಿ ಶರಣೇಗೌಡ, ಚಂದ್ರಶೇಖರ, ಚಂದ್ರಕಾಂತರೆಡ್ಡಿ, ಹನುಮಂತರೆಡ್ಡಿ, ಮುರಳಿ ಮೋಹನರೆಡ್ಡಿ, ಚಂದ್ರಶೇಖರರೆಡ್ಡಿ, ಪವನಕುಮಾರರೆಡ್ಡಿ, ರವಿಶಂಕರರೆಡ್ಡಿ, ಲೋಕೇಶರೆಡ್ಡಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಇಲ್ಲಿನ ಬಳ್ಳಾರಿ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿಯಲ್ಲಿರುವ ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಸಂಘದ ಕಛೇರಿಯಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಿಸಿದರು.