ನಾಲ್ಕು ಪ್ರಶ್ನೆಗಳಿಗೆ ಉತ್ತರಕೊಡಿ ನಿರ್ಮಲಾಜೀ..! ಕಾಂಗ್ರೆಸ್

ನವದೆಹಲಿ,ಏ ೨೯,ಬ್ಯಾಂಕುಗಳಿಗೆ  ಬಣ್ಣ ಬಣ್ಣದ  ಟೋಪಿ ಹಾಕಿ  ಉದ್ದೇಶ ಪೂರ್ವಕ  ಸಾಲ ಮರುಪಾವತಿಸದ  ೫೦ ಮಂದಿ ಸುಸ್ತಿದಾರರಲ್ಲಿ  ಬಿಜೆಪಿ  ಸ್ನೇಹಿತರೇ  ಹೆಚ್ಚು ಮಂದಿ ಇದ್ದಾರೆ  ಎಂಬ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ  ಆರೋಪಕ್ಕೆ  ಕೇಂದ್ರ  ಹಣಕಾಸು  ಸಚಿವೆ  ನಿರ್ಮಲಾ ಸೀತಾರಾಮನ್  ಬುಧವಾರ ಬೆಳಗ್ಗೆ  ೧೩ ಸರಣಿ  ಟ್ವೀಟ್ ಗಳ  ಮೂಲಕ ತಿರುಗೇಟು ನೀಡಿದ್ದರು.ಆದರೆ, ಕಾಂಗ್ರೆಸ್  ಪಕ್ಷ ಈ ವಿವಾದವನ್ನು  ಇಷ್ಟಕ್ಕೇ  ನಿಲ್ಲಿಸುವಂತೆ  ಕಾಣಿಸುತ್ತಿಲ್ಲ..  ನಾವು  ಕೇಳುತ್ತಿರುವ ನಾಲ್ಕು ಪ್ರಶ್ನೆಗಳಿಗೆ  ಸರಳವಾಗಿ    ಉತ್ತರ  ನೀಡುವಂತೆ   ಪಕ್ಷದ   ವಕ್ತಾರ  ರಣದೀಪ್  ಸುರ್ಜಿವಾಲ ಮತ್ತೆ  ಬಿಜೆಪಿ ಹಾಗೂ ಕೇಂದ್ರ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಅವರನ್ನು  ಒತ್ತಾಯಿಸಿದ್ದಾರೆ.  

ವಿತ್ತ ಖಾತೆಯಂತಹ   ಉನ್ನತ  ಸಚಿವ ಸ್ಥಾನದಲ್ಲಿರುವ  ನೀವು(ನಿರ್ಮಲಾ ಸೀತಾರಾಮನ್)  ಸಮಸ್ಯೆಯನ್ನು  ದಾರಿ ತಪ್ಪಿಸುತ್ತಿದ್ದೀರಿ. ಇದು  ಸರಿಯಲ್ಲ ಎಂದು ಟ್ವೀಟ್ ನಲ್ಲಿ  ಆಕ್ಷೇಪಿಸಿದ್ದಾರೆ.
ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ.. ಈ ಮೂವರಿಂದ  ಸ್ವಾಧೀನ ಪಡಿಸಿಕೊಂಡಿದೆ ಎಂದು  ಸರ್ಕಾರ  ಹೇಳುತ್ತಿರುವ   ಸಂಪತ್ತಿಗೂ,  ಅವರು   ಹೊಂದಿರುವ  ಸಂಪತ್ತಿನ ನಡುವೆ  ಭಾರಿ  ವ್ಯತ್ಯಾಸ ಇದೆ ಎಂದು  ಸುರ್ಜಿವಾಲ  ಹೇಳಿದ್ದಾರೆ. 
ಈ ಮೂವರಿಂದ  ೨,೭೮೦.೫೦ ಕೋಟಿ  ಸ್ವಾಧೀನ ಪಡಿಸಿಕೊಂಡಿದ್ದೇವೆ  ಎಂದು  ನೀವು(ನಿರ್ಮಲಾ ಸೀತಾರಾಮನ್)  ಟ್ವೀಟ್  ಮಾಡಿದ್ದೀರಿ, ಆದರೆ, ೨೦೨೦ ಮಾರ್ಚ್  ೧೬  ಸಂಸತ್ ವ್ಯವಹಾರಗಳಿಗೆ   ಸಂಬಂಧಿಸಿದ  ಸಚಿವರು ನೀಡಿರುವ   ಉತ್ತರದಲ್ಲಿ.. ಜಾರಿ ನಿರ್ದೇಶನಾಲಯ, ಫೆಮಾ,  ಪಿ ಎಂ ಎಲ್ ಎ  ಕಾಯ್ದೆಯಡಿ ಐದು ವರ್ಷಗಳಲ್ಲಿ ಕೇವಲ ೯೬.೯೩ ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಸಂಸತ್ತಿಗೆ  ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದ  ನ್ಯೂಸ್  ಕಟ್ಟಿಂಗ್  ತಮ್ಮ   ಟ್ವೀಟ್   ಜತೆ ಸೇರಿಸಿದ್ದಾರೆ 
ಅಸಲಿಗೆ  ಪ್ರಧಾನಿ ಮೋದಿ  ನೇತೃತ್ವದ ಸರ್ಕಾರ  ೨೦೧೪-೧೫ ರಿಂದ ೨೦೧೯ -೨೦ ಮಧ್ಯ ಕಾಲದಲ್ಲಿ  ೬.೬೬ ೦೦೦ ಕೋಟಿ ರೂಪಾಯಿ  ಬ್ಯಾಂಕ್ ಸಾಲಗಳನ್ನು  ಏಕೆ ರದ್ದುಪಡಿಸಿತು ಎಂದು    ರಣದೀಪ್ ಸುರ್ಜಿವಾಲ ಪ್ರಶ್ನಿಸಿದ್ದಾರೆ.
ಈ ತಿಂಗಳ ೨೪ ರಂದು  ರಿಸರ್ವ್ ಬ್ಯಾಂಕ್   ಮಾಹಿತಿ  ಹಕ್ಕು  ಕಾಯ್ದೆಅಡಿ  ಕೋರಿದ್ದ  ಆರ್ಜಿಗೆ  ನೀಡಿರುವ ಉತ್ತರದಲ್ಲಿ ೬೮,೬೦೭ ಕೋಟಿ ರೂಪಾಯಿ  ಸಾಲ  ಮನ್ನಾ  ಮಾಡಿರುವುದಾಗಿ  ತಿಳಿಸಿದೆ. ಇದು  ಸತ್ಯವೋ ?  ಅಲ್ಲವೋ ..? ನೀರವ್ ಮೋದಿ, ಮೆಹುಲ್ ಚೋಕ್ಸಿ, ಜತಿನ್ ಮೆಹತಾ,ವಿಜಯ್ ಮಲ್ಯ ಸೇರಿ  ಹಲವು ಮಂದಿ ಸುಸ್ತಿದಾರರ ಸಾಲಗಳನ್ನು  ಸರ್ಕಾರ  ಏಕೆ ಮನ್ನಾ ಮಾಡಿದೆ? ಇದಕ್ಕೆ ಅನುಮತಿ  ನೀಡಿದವರು ಯಾರು?  ಎಂದು ಸುರ್ಜಿವಾಲ  ನೇರವಾಗಿ ಪ್ರಶ್ನಿಸಿದ್ದಾರೆ.  ಇವುಗಳಿಗೆ ಉತ್ತರ ನೀಡಬೇಕೆಂದು  ಕೋರಿದ್ದಾರೆ.