ನಾಲ್ಕು ದಿನಗಳ ನಂತರ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತ

ಶ್ರೀನಗರ, ಜ 17, ಹಿಮ ಮತ್ತು ಭೂಕುಸಿತಗಳಿಂದಾಗಿ ನಾಲ್ಕು ದಿನಗಳಿಂದ ಮುಚ್ಚಲ್ಪಟ್ಟಿದ್ದ ್ಕಕಾಶ್ಮೀರ ಕಣಿವೆಯನ್ನು ದೇಶದ ಉಳಿದ ಭಾಗಗಳಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಶುಕ್ರವಾರ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಶ್ರೀನಗರದಿಂದ ಜಮ್ಮು ಕಡೆಗೆ ಒಂದು ದಿಕ್ಕಿನಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಯುಎನ್‍ಐಗೆ ಇಂದು ಬೆಳಿಗ್ಗೆ ತಿಳಿಸಿದ್ದಾರೆ. ಆದರೆ, ಕುಸಿದ ತಾಪಮಾನದಿಂದ ಜಾರುವ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯವಾಗಿ ಕ್ವಾಜಿಗುಂಡ್ ನಿಂದ ಬನಿಹಾಲ್ ಮತ್ತು ಶೈತಾನ್ ನಲ್ಲಾ ಗೆ ರಸ್ತೆ ಸಂಚಾರಕ್ಕೆ ಸುರಕ್ಷಿತವೆನಿಸಿದರೆ ಮಾತ್ರ ಅವಕಾಶ ನೀಡಲಾಗುವುದು. ಕ್ವಾಜಿಗುಂಡ್, ಜವಾಹರ್ ಸುರಂಗ, ಬನಿಹಾಲ್ ಮತ್ತು ಶೈತಾನ್ ನಲ್ಲಾ ದಲ್ಲಿ ಹಿಮಸುರಿಯುವಿಕೆ ಮತ್ತು ಭೂಕುಸಿತಗಳಿಂದ ಹಾಗೂ ರಂಬಾನ್ ಮತ್ತು ರಂಶು ನಡುವೆ ಹತ್ತಾರು ಕಡೆ ಬಂಡೆಗಳು ಜಾರಿದ ಹಿನ್ನೆಲೆಯಲ್ಲಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರದಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ ಎಚ್‍ಎಐ) ತಕ್ಷಣವೇ ಕಾರ್ಯಪ್ರವೃತ್ತವಾಗಿ ಹೆದ್ದಾರಿಯಲ್ಲಿ ಅತ್ಯಾಧುನಿಕ ಯಂತ್ರಗಳಿಂದ ಹಿಮವನ್ನು ಮತ್ತು ಕಲ್ಲು-ಮಣ್ಣನ್ನು ಗುರುವಾರ ಮಧ್ಯಾಹ್ನದ  ವೇಳೆಗೆ ತೆರವುಗೊಳಿಸಿದೆ. ನಾಲ್ಕು ದಿನಗಳಿಂದ ಅಲ್ಲಲ್ಲೇ ಸಿಲುಕಿಕೊಂಡಿದ್ದ ವಾಹನಗಳು ತಮ್ಮ ಸ್ಥಳ ತಲುಪುವಂತೆ ಅನುವು ಮಾಡಿಕೊಡಲಾಗಿದೆ. ಶ್ರೀನಗರದ ಕಡೆ ತೆರಳುವ ಅಗತ್ಯ ವಸ್ತಗಳನ್ನು ಸಾಗಿಸುವ ಟ್ರಕ್‍ಗಳು, ಡೀಸೆಲ್, ಎಲ್ ಪಿಜಿ ಟ್ಯಾಂಕರ್ ಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.