ಹಿಲದಹಳ್ಳಿಯಲ್ಲಿ ನೂತನ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶಂಕುಸ್ಥಾಪನೆ .ಬಡವರ ಮಕ್ಕಳು ಶಿಕ್ಷಣದಿಂದ ಶ್ರೀಮಂತರಾಗಬೇಕು - ಪ್ರಕಾಶ ಕೋಳಿವಾಡ
.ರಾಣೇಬೆನ್ನೂರ 28 : ಬಡವರ, ಹಿಂದುಳಿದವರ, ದರಿತರ ಮಕ್ಕಳು ಶಿಕ್ಷಣವಂತರಾಗಬೇಕು ಆಗ ಮಾತ್ರ ಎಲ್ಲರೂ ಶಿಕ್ಷಣವಂತರಾಗಿ ಸಮಾಜದ ಏಳಿಗೆ, ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿ ಹೊಂದಲು ಸಾಧ್ಯ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು ಗುರುವಾರ ಸಂಜೆ ತಾಲೂಕಿನ ಹೀಲದಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಇದರ ಸಂಯುಕ್ತ ಆಶ್ರಯದಲ್ಲಿ ಅಂದಾಜು 22 ಕೋಟಿ ರೂ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಎಸ್ ಟಿ ಸಮಿತಿಯಲ್ಲಿ ಸದಸ್ಯನಿದ್ದಾಗಲೆ ಈ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಜೂರಾತಿಯಾಗಿತ್ತು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇದು ಅನುಕೂಲವಾಗಲಿದೆ ಎಂಬ ಆಸೆ ಆವಾಗಲೇ ನನಗಿತ್ತು. ಇದೀಗ ಆಸೆ ಈಡೇರಿತು ಎಂದರು. ಈ ಮೊರಾರ್ಜಿ ವಸತಿ ಶಾಲೆಯ ಕಟ್ಟಡ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳಲಿದೆ. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು. ಮತ್ತು ತಮ್ಮೂರ ಈ ವಸತಿ ಶಾಲೆಯು ಗಮನ ಹರಿಸಿ ಕೆಲಸ ಮಾಡಿಸಿಕೊಳ್ಳಬೇಕು, ಒಂದು ವೇಳೆ ಕಾಮಗಾರಿ ಕಳಪೆಯಾದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಯಾವುದೇ ಗ್ರಾಮದಲ್ಲಿ ದೇವಸ್ಥಾನ ಅಭಿವೃದ್ಧಿಗೆ ಹಾಗೂ ಹಾಗೂ ರಸ್ತೆಗಳ ಅಭಿವೃದ್ಧಿಗೆ ನನ್ನ ಅನುದಾನದಲ್ಲಿ ಅನುದಾನ ಕೊಡುವುದಿಲ್ಲ. ಅದಕ್ಕಾಗಿ ಪಿಡಬ್ಲ್ಯೂಡಿ, ದತ್ತಿ ಇಲಾಖೆ ವತಿಯಿಂದ ನೀಡಲ್ಪಡುತ್ತದೆ. ನನ್ನ ಅನುದಾನವು ಕೇವಲ ಶಿಕ್ಷಣಕ್ಕಾಗಿ ಮಾತ್ರ ಮೀಸಲೀಡುವೆ. ಡಿಜಿಟಲ್ ಲೈಬ್ರರಿ ಮಾಡಲು ಶಾಸಕರ ಹಣ ಮೀಸಲಾಗಿಡುವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪದವೀಧರ ಯುವಕರು ತೇರ್ಗಡೆಯಾಗಬೇಕು ಎಂಬ ಸದುದ್ದೇಶದಿಂದ ಡಿಜಿಟಲ್ ಲೈಬ್ರರಿಗೆ ಹೆಚ್ಚಿನ ಆದ್ಯತೆ ನೀಡಿರುವೆ ಎಂದರು. ಮುಂಬರುವ ದಿನಮಾನಗಳಲ್ಲಿ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಡಿಜಿಟಲ್ ಲೈಬ್ರರಿ ನೀಡುವ ಯೋಜನೆ ಇದೆ. ಈಗಾಗಲೇ ಹಿರೇಬಿದರಿ ,ಐರಣಿ, ನದಿ ಹರಳಹಳ್ಳಿ, ಕರೂರ ಗ್ರಾಮ ಪಂಚಾಯತಿಗಳಲ್ಲಿ ಡಿಜಿಟಲ್ ಲೈಬ್ರರಿ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ತಾಲೂಕ ಅಧ್ಯಕ್ಷ ಮಂಜನ ಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷ ಸುಧಾ ಕಾಟೇನಹಳ್ಳಿ, ಸದಸ್ಯರುಗಳಾದ ಅಶೋಕ್ ಪಾಟೀಲ್, ಅಶೋಕ ಬಾಪುರಿ, ಬಸಪ್ಪ ಮಾಲಿಂಗಪ್ಪನವರ್, ರೋಹಿತ್ ಲಮಾಣಿ ,ಪುಷ್ಪಾ ದಳವಾಯಿಮಠ, ಶಾರವ್ವ ಚೌಟಗಿ, ದುರ್ಗಪ್ಪ ಬಾಲ ಬಸವರ, ಗುತ್ತಿಗೆದಾರ. ಜಿ.ವಿ ಗೋಪಾಲರೆಡ್ಡಿ, ಶ್ರೀಹರಿ,ಎಇಇ ವಿ.ನಟರಾಜ್, ಎಇ ದರ್ಶನ ಶಾಲೆಯ ಸಿಬ್ಬಂದಿಗಳು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.