ಬೆಂಗಳೂರು 08: ಮಾಜಿ ಸಚಿವ, ಚಳ್ಳಕೆರೆ ಕ್ಷೇತ್ರದ ಮೂರು ಬಾರಿಯ ಶಾಸಕ, ವಾಲ್ಮೀಕಿ ಸಮುದಾಯದ ನಾಯಕ ತಿಪ್ಪೇಸ್ವಾಮಿ ಅವರು ಬುಧವಾರ ಬೆಳಗ್ಗೆ ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ತವರು ಗ್ರಾಮ ಚಿತ್ರದುರ್ಗದ ಚಳ್ಳಕೆರೆ ಗ್ರಾಮದ ಕಾಳಪ್ಪನ ಹಟ್ಟಿಯಲ್ಲಿ ಅಂತಿಮ ದರ್ಶನದ ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ.
ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಎಚ್.ಡಿ.ದೇವೇಗೌಡ ಅವರ ಸಂಪುಟದಲ್ಲಿ ಅಬಕಾರಿ ಖಾತೆ, ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. ಜೆಡಿಎಸ್ ತೊರೆದಿದ್ದ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು.