ಮಾಜಿ ಸಚಿವ ಎಂ.ಬಿ. ಪಾಟೀಲ್ ಗೆ ರಾಜಸ್ತಾನದ ಪರ್ಯಾವರಣ ರಕ್ಷಕ ಸಮ್ಮಾನ್ ಪುರಸ್ಕಾರ

ವಿಜಯಪುರ, ಜ 13, ರಾಜಸ್ಥಾನದ ತರುಣ್‌ಭಾರತ ಸಂಘದಿಂದ ಪ್ರತಿ ವರ್ಷ ನೀಡುವ ಪರ್ಯಾವರಣ ರಕ್ಷಕ ಸಮ್ಮಾನ-೨೦೧೯ ಪ್ರಶಸ್ತಿಗೆ ಜಲಸಂಪನ್ಮೂಲ, ಗೃಹ ಖಾತೆ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಆಯ್ಕೆಯಾಗಿದ್ದಾರೆ. ಎಂ.ಬಿ.ಪಾಟೀಲ್‌ ಪರಿಸರ ರಕ್ಷಣೆಯಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನೀರಿನ ಗಾಂಧಿ ಎಂದೆ ಖ್ಯಾತರಾದ, ವರ್ಡ್‌ವಾಟರ್ ಪ್ರೈಸ್ ಪುರಸ್ಕಾರ ವಿಜೇತ ಡಾ.ರಾಜೇಂದ್ರ ಸಿಂಗ್ ಸ್ಥಾಪಿಸಿದ ತರುಣ್ ಭಾರತ ಸಂಘ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಬಿಕಾಂಪುರ ಗ್ರಾಮದಲ್ಲಿ ಪ್ರತಿ ವರ್ಷ ಸಂಕ್ರಾಂತಿಯ ಶುಭದಿನದಂದು ರಾಷ್ಟ್ರದಾದ್ಯಂತ ಪರಿಸರ ರಕ್ಷಣೆಯಲ್ಲಿ ತೊಡಗಿರುವ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡುತ್ತಿದೆ. ಮಕರ ಸಂಕ್ರಮಣ ದಿನ ದಿ.೧೫ರಂದು ಬುಧವಾರ ಬೆ.೯ಗಂ. ರಾಜಸ್ಥಾನದ ತರುಣ್ ಭಾರತ ಸಂಘ ಆಶ್ರಮದಲ್ಲಿ ಈ ಪ್ರಶಸ್ತಿಯನ್ನು ಮಹಾತ್ಮಾ ಗಾಂಧೀಜಿ ಅವರ ಮೊಮ್ಮಗ ಅರುಣ್ ಗಾಂಧಿ ನೀಡಲಿದ್ದಾರೆ. 

ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯದಾದ್ಯಂತ ಕೈಗೊಂಡ ಕೆರೆ ತುಂಬುವ ಯೋಜನೆಗಳು ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಆ ಕೆರೆಯ ಸುತ್ತಲಿನ ಪ್ರದೇಶದಲ್ಲಿ ಜೀವ ವೈವಿದ್ಯತೆ ಪುನರ್ ಸ್ಥಾಪಿಸುವಲ್ಲಿ ಈ ಯೋಜನೆ ಯಶಸ್ಸು ಕಂಡಿದೆ. ಮತ್ತು ವಿಜಯಪುರ ನಗರ ಹೊರವಲಯದ ಭೂತನಾಳ ಹತ್ತಿರ ೫೦೦ಎಕರೆ ಪ್ರದೇಶದಲ್ಲಿ ೬೦ಸಾವಿರ ಸಸಿಗಳನ್ನು ನೆಟ್ಟು ಪೋಷಿಸುತ್ತಿರುವದನ್ನು ಪ್ರಶಸ್ತಿ ಆಯ್ಕೆ ಸಮಿತಿ ಪರಿಗಣಿಸಿದೆ.