ನವದೆಹಲಿ, ಆಗಸ್ಟ್ 21 ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರ ವಿರುದ್ದ ಜಾರಿ ನಿರ್ದೇಶನಾಲಯ ಬುಧವಾರ ಲುಕ್ ಔಟ್ ನೋಟೀಸ್ ಹೊರಡಿಸಿದೆ.
ತನಿಖಾ ಸಂಸ್ಥೆಯ ಅಧಿಕಾರಿಗಳ ವಿಚಾರಣೆಗೆ ಚಿದಂಬರಂ ಲಭ್ಯವಾಗದ ಹಿನ್ನಲೆಯಲ್ಲಿ ಅವರ ವಿರುದ್ಧ ಲುಕ್ ಔಟ್ ನೋಟೀಸ್ ಹೊರಡಿಸಿದೆ.
ದೆಹಲಿ ಹೈಕೋರ್ಟ್ ಮಂಗಳವಾರ ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ನಂತರ ಕೇಂದ್ರ ಹಣಕಾಸು ತನಿಖಾ ಸಂಸ್ಥೆ ಈ ಕ್ರಮ ಕೈಗೊಂಡಿದೆ.
ಐ ಎನ್ ಎಕ್ಸ್ ಮೀಡಿಯಾ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಚಿದಂಬರಂ ಅವರನ್ನು ವಿಚಾರಣೆಗೊಳಸಲು ಮುಂದಾಗಿದೆ.
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಬಂಧನದಿಂದ ಮಧ್ಯಂತರ ರಕ್ಷಣೆ ಒದಗಿಸಬೇಕೆಂಬ ಚಿದಂಬರಂ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದ ನಂತರ ಚಿದಂಬರಂ ಅವರಿಗಾಗಿ ಈ ಎರಡೂ ತನಿಖಾ ಸಂಸ್ಥೆಗಳು ಹುಡುಕಾಡುತ್ತಿವೆ.
ಚಿದಂಬರಂ ವಿರುದ್ದ ಯಾವುದೇ ದ್ವೇಷದ ಕ್ರಮ ಕೈಗೊಳ್ಳದಂತೆ ಮಾಜಿ ಕೇಂದ್ರ ಹಣಕಾಸು ಸಚಿವರ ವಕೀಲರ ತಂಡ ಮನವಿ ಮಾಡಿದ್ದರೂ, ಚಿದಂಬರಂ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಿಬಿಐ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ.
ಬಂಧನದಿಂದ ರಕ್ಷಣೆ ಕೋರಿ ಚಿದಂಬರಂ ಸಲ್ಲಿಸಿರುವ ಅರ್ಜಿ ಸಂಬಂಧ ಸಿಬಿಐ ಹಾಗೂ ಇಡಿ ಸುಪ್ರೀಂ ಕೋರ್ಟ್ಗೆ ಕೇವಿಯಟ್ ಸಲ್ಲಿಸಿವೆ.
ಸುಪ್ರೀಂ ಕೋರ್ಟ್ ಚಿದಂಬರಂ ಅವರ ಅರ್ಜಿಯ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಿದೆ
ಏನಿದು ಲುಕ್ ಔಟ್ ನೋಟೀಸ್ ?
ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಯಾವುದೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ವಿಚಾರಣೆಗೆ ಮುಂದಾಗಿ, ಅಕಸ್ಮಾತ್ ನೊಟೀಸ್ ನೀಡಿಯೂ ಆತ ವಿಚಾರಣೆಗೆ ಹಾಜರಾಗದಿದ್ದಲ್ಲಿ ಆತ ದೇಶದಿಂದ ತಪ್ಪಿಸಿಕೊಳ್ಳದಂತೆ ತಡೆಹಿಡಿಯಲು ಆರೋಪಿಯ ವಿರುದ್ಧ ಅಧಿಕಾರಿಗಳು ಈ ಲುಕ್ಔಟ್ ನೊಟೀಸ್ ಅಸ್ತ್ರವನ್ನು ಪ್ರಯೋಗಿಸುತ್ತಾರೆ.
ಲುಕ್ನೊಟೀಸ್ಗೆ ಒಳಗಾದ ಯಾವುದೇ ವ್ಯಕ್ತಿಯ ಪೋಟೋವನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುತ್ತಾರೆ. ಅಲ್ಲದೆ, ಈ ಪೋಟೋದಲ್ಲಿರುವವರ ಕುರಿತು ಮಾಹಿತಿ ನೀಡಿ ಎಂದು ಸಾರ್ವಜನಿಕರ ಬಳಿ ಮನವಿ ಮಾಡಲಾಗುತ್ತದೆ.
ಸಾಮಾನ್ಯವಾಗಿ ಇಂತಹ ನೊಟೀಸ್ಗಳನ್ನು ಕ್ರಿಮಿನಲ್ ಅಥವಾ ಆರ್ಥಿಕ ಅಪರಾಧಿಗಳ ವಿರುದ್ಧ ಹೊರಡಿಸಲಾಗುತ್ತದೆ. ಆದರೆ, ಮಾಜಿ ಕೇಂದ್ರ ಹಣಕಾಸು ಸಚಿವರ ವಿರುದ್ಧ ಇಂತಹ ನೊಟೀಸ್ ಒಂದನ್ನು ಜಾರಿ ಮಾಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಹೀಗಾಗಿ ಪಿ. ಚಿದಂಬರಂ ಇಂದು ಬಂಧನಕ್ಕೆ ಒಳಗಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.