ಭೋಪಲ್, ಆ 21 ದೀರ್ಘ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತೀಯ ಜನತಾ ಪಕ್ಷದ(ಬಿಜೆಪಿ) ಮುಖ್ಯಸ್ಥ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ಅವರು ಬುಧವಾರ ಮುಂಜಾನೆ ವಿಧಿವಶರಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ನಿಧನ ಕುರಿತು ಮಧ್ಯಪ್ರದೇಶದ ಬಿಜೆಪಿ ರಾಜ್ಯ ಮಾಧ್ಯಮ ಉಸ್ತುವಾರಿ ಲೋಕೇಂದ್ರ ಪರಶಾರ್ ಸ್ಪಷ್ಟಪಡಿಸಿದ್ದು, ಗೌರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಳೆದ ಆ.7 ರಂದು ರಕ್ತದೊತ್ತಡ ಕಡಿಮೆಯಾಗಿ 89ರ ಪ್ರಾಯದ ಬಾಬುರಾವ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾದ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂಧಿಸದ ಕಾರಣ ಅವರು ಬುಧವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. 1930 ಜೂನ್ 2 ರಂದು ಜನಿಸಿದ್ದ ಬಾಬುಲಾಲ್ ಗೌರ್, ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷವನ್ನು ಎಲ್ಲೆಡೆ ವಿಸ್ತರಿಸುವಲ್ಲಿ ಬಹಳಷ್ಟು ಶ್ರಮಿಸಿದ್ದರು. ಅವರು 2004 ರಿಂದ 2005ರ ನವೆಂಬರ್ ವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ವಯಸ್ಸಾದ ಹಿನ್ನೆಲೆಯಲ್ಲಿ 2018ರಲ್ಲೇ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಪಡೆದಿದ್ದರು.