ವಿಜಯವಾಡ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ನಾಯ್ಡುಗೆ ಅಪಮಾನ

 ವಿಜಯವಾಡ,ಜೂನ್ 15: ಶುಕ್ರವಾರ ಮಧ್ಯರಾತ್ರಿ ಗನ್ನಾವರಂ  ವಿಮಾನ ನಿಲ್ದಾಣ  ಪ್ರವೇಶಿಸಿದ ಆಂಧ್ರ ಪ್ರದೇಶ  ವಿಧಾನಸಭೆಯ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ  ಎನ್. ಚಂದ್ರಬಾಬು ನಾಯ್ಡು ಅವರನ್ನು ಭದ್ರತಾ ಸಿಬ್ಬಂದಿ  ತಪಾಸಣೆ ನಡೆಸುವ ಮೂಲಕ ಅಪಮಾನ   ಎಸಗಿದ್ದಾರೆ ಎಂದು ತೆಲುದೇಶಂ ಪಕ್ಷ  ದೂರಿದೆ. ಝೆಡ್  ಪ್ಲಸ್  ಕ್ಯಾಟಗರಿ ಭದ್ರತೆಯನ್ನು ಹೊಂದಿರುವ ಚಂದ್ರಬಾಬುನಾಯ್ಡು,  ಹೈದ್ರಾಬಾದ್ ಗೆ ತೆರಳಲು  ಗನ್ನಾವರಂ ವಿಮಾನ ನಿಲ್ದಾಣ ಬಳಿಗೆ ಬಂದಾಗ,  ಅವರ ಬೆಂಗಾವಲು ಒಳಪ್ರವೇಶಿಸಲು  ಅವಕಾಶ ನೀಡದ ಕಾರಣ, ವಾಹನದಿಂದ  ಇಳಿದ ನಾಯ್ಡು,  ಸಾಮಾನ್ಯ ಮಾರ್ಗದಲ್ಲಿ  ವಿಮಾನ ನಿಲ್ದಾಣ ಪ್ರವೇಶಿಸಿದರು. ಏರ್ ಪೋರ್ಟ್  ಲಾಂಜ್ ನಲ್ಲಿ  ಲೋಹ ಶೋಧಕದ ಮೂಲಕ  ಒಳ ಪ್ರವೇಶಿಸಿದ ನಾಯ್ಡು ಅವರನ್ನು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದರು.  ತಮ್ಮ  ಎರಡೂ ಕೈಗಳನ್ನು  ಮೇಲೆತ್ತಿ   ನಾಯ್ಡು ಅವರು ಭದ್ರತಾ ಸಿಬ್ಬಂದಿಯ ತಪಾಸಣೆಗೆ  ಸಹಕರಿಸಿದರು. ನಂತರ  ಎಲ್ಲ ಪ್ರಯಾಣಿಕರಂತೆ ವಿಮಾನ ನಿಲ್ದಾಣದ ಬಸ್ಸಿನಲ್ಲಿ ಪ್ರಯಾಣಿಸದರು. ಚಂದ್ರಬಾಬು ನಾಯ್ಡು ಅವರನ್ನು ವಿಮಾನನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಗೃಹ ಸಚಿವ  ಎನ್ . ಚಿನ್ನರಾಜಪ್ಪ,  ವಿಮಾನ ನಿಲ್ದಾಣದಲ್ಲಿ  ತೆಲುಗುದೇಶಂ ರಾಷ್ಟ್ರೀಯ ಅಧ್ಯಕ್ಷರನ್ನು ಕೆಟ್ಟದಾಗಿ ನಡೆಸಿಕೊಂಡು ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ  ಚಂದ್ರಬಾಬು ನಾಯ್ಡು ಅವರನ್ನು ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ  ಸಾಮಾನ್ಯ ವ್ಯಕ್ತಿಯಂತೆ ಪರಿಗಣಿಸಿ  ಅಪಮಾನಿಸಿರುವುದು ಖಂಡನೀಯ  ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ   ಝೆಡ್ ಪ್ಲಸ್ ಭದ್ರತೆ ಹೊಂದಿರುವ ಮಾಜಿ ಮುಖ್ಯಮಂತ್ರಿಯೊಬ್ಬರನ್ನು  ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ  ಸಾಮಾನ್ಯ ವ್ಯಕ್ತಿಯೆಂದು ಪರಿಗಣಿಸಿ  ಅಪಮಾನಿಸಿರುವುದು   ಎಷ್ಟು ಸರಿ ?,  ಅವರಿಗೆ ಏನಾದರೂ ಆದರೆ ಅದರ ಜವಾಬ್ದಾರಿ ಹೊರುವರು ಯಾರು ಎಂದು  ಚಿನ್ನರಾಜಪ್ಪ ಪ್ರಶ್ನಿಸಿದ್ದಾರೆ.