ಭೋಪಾಲ್, ಆ 21 ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಬಾಬುಲಾಲ್ ಗೌರ್ ದಶಕಗಳ ಕಾಲ ಜನರಿಗೆ ಸೇವೆ ಸಲ್ಲಿಸಿದವರು. ಜನಸಂಘದ ದಿನಗಳಿಂದ ಅವರು ನಮ್ಮ ಪಕ್ಷವನ್ನು ಬಲಪಡಿಸಲು ನಿರಂತರವಾಗಿ ಶ್ರಮಿಸಿದರು. ಸಚಿವರು ಮತ್ತು ಮುಖ್ಯಮಂತ್ರಿಯಾಗಿ ರಾಜ್ಯವನ್ನು ಪರಿವರ್ತಿಸಲು ಅನೇಕ ಪ್ರಯತ್ನಗಳನ್ನು ಕೈಗೊಂಡರು. ಅವರ ನಿಧನದಿಂದ ಬೇಸರವಾಗಿದೆ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪವಿದೆ ಓಂ ಶಾಂತಿ ಎಂದು ಟ್ವಿಟರ್ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ (89) ಅವರು ಬುಧವಾರ ಮುಂಜಾನೆ ವಿಧಿವಶರಾಗಿದ್ದಾರೆ. ಕಳೆದ ಆ.7 ರಂದು ರಕ್ತದೊತ್ತಡ ಕಡಿಮೆಯಾದ ಪರಿಣಾಮ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. 1930 ಜೂನ್ 2 ರಂದು ಜನಿಸಿದ್ದ ಬಾಬುಲಾಲ್ ಗೌರ್, ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷವನ್ನು ಎಲ್ಲೆಡೆ ವಿಸ್ತರಿಸುವಲ್ಲಿ ಬಹಳಷ್ಟು ಶ್ರಮಿಸಿದ್ದರು. ಅವರು 2004 ರಿಂದ 2005ರ ನವೆಂಬರ್ ವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ವಯಸ್ಸಾದ ಹಿನ್ನೆಲೆಯಲ್ಲಿ 2018ರಲ್ಲೇ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಪಡೆದಿದ್ದರು.