ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಮೀನಾಕ್ಷಿ ಬಣ್ಣದ ಭಾವಿ

ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಮೀನಾಕ್ಷಿ ಬಣ್ಣದ ಭಾವಿ  Forest conservation is everyone's responsibility: Meenakshi Bannada Bhavi


ಕೊಪ್ಪಳ, ಸೆ. 15: ಅರಣ್ಯಗಳು ಮಳೆನೀರಿನ ಸಂರಕ್ಷಣೆ, ಮಣ್ಣಿನ ರಕ್ಷಣೆ, ಜೀವ ವೈವಿಧ್ಯ ಹಾಗೂ ಹವಾಮಾನ ಸಮತೋಲನಕ್ಕೆ ಅತ್ಯಂತ ಅಗತ್ಯವಾಗಿವೆ. ಪರಿಸರ ಸಂರಕ್ಷಣೆಗಾಗಿ ಅರಣ್ಯಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದ ಭಾವಿ ಹೇಳಿದರು.  

ತಾಲೂಕಿನ ಕಾಟ್ರಳ್ಳಿ ಗ್ರಾಮದ ದತ್ತು ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಅರಣ್ಯ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಬಲಿದಾನವನ್ನು ಸ್ಮರಿಸಿ ಅವರಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.  

ಕಾರ್ಯಕ್ರಮದಲ್ಲಿ ಮಾತನಾಡಿದ ಮೀನಾಕ್ಷಿ ಬಣ್ಣದ ಭಾವಿ, ಅರಣ್ಯ ಸಂರಕ್ಷಣೆಯ ಇತಿಹಾಸದಲ್ಲಿ 1730ರಲ್ಲಿ ರಾಜಸ್ಥಾನದ ಒಂದು ಗ್ರಾಮದಲ್ಲಿ ಮರಗಳನ್ನು ರಕ್ಷಿಸಲು ಅಮೃತಾ ದೇವಿ ಸೇರಿದಂತೆ ನೂರಾರು ಜನರು ತಮ್ಮ ಪ್ರಾಣ ತ್ಯಾಗ ಮಾಡಿದ ಘಟನೆ ಮಹತ್ವದ ಸ್ಥಾನ ಪಡೆದಿದೆ. ಆ ತ್ಯಾಗದ ಸ್ಮರಣಾರ್ಥ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.  

ಅರಣ್ಯ ಹುತಾತ್ಮರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ “ಅರಣ್ಯ ಉಳಿಸಿ, ಪರಿಸರ ಉಳಿಸಿ” ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಪರಿಸರ ಸಂರಕ್ಷಣೆಗಾಗಿ ಅರಣ್ಯಗಳನ್ನು ಉಳಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು.  

ಇದೇ ವೇಳೆ, ಕೊಪ್ಪಳ ಇನ್ನರ್ ವೀಲ್ ಕ್ಲಬ್ ಪರವಾಗಿ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.  ಕ್ಲಬ್ ಖಜಾಂಚಿ ಶಿಲ್ಪಾ ರಾಜು ಶಶಿಮಠ ಅವರು ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.  

ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ಶ್ರೀದೇವಿ ಪಾಟೀಲ, ಐಎಸ್‌ಒ ಲತಾ ಪಟ್ಟಣಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯೆ ಶಾರದಾ ದಾದ್ಮಿ, ಹಿರಿಯರಾದ ಡಾ. ರಾಧಾ ಕುಲಕರ್ಣಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು