ಬಿಜ್ಜರಗಿಯಲ್ಲಿ ಐದು ದಿನಗಳ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ

ಬಿಜ್ಜರಗಿಯಲ್ಲಿ ಐದು ದಿನಗಳ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ  Five-day spiritual discourse series launched in Bijjaragi

ಲೋಕದರ್ಶನ ವರದಿ 

ಬಿಜ್ಜರಗಿ, ಸೆ.15: ಶ್ರೀ ಸದಾಶಿವ ಗಜಾನನ ಯುವಕ ಮಂಡಳಿ ವತಿಯಿಂದ ಗಣೇಶೋತ್ಸವದ ಅಂಗವಾಗಿ ವಿಜಯನಗರಿಯ ಮಾಣಿಕೇಶ್ವರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ವೇದಮೂರ್ತಿ ಶ್ರೀ ಶಂಭುಲಿಂಗಯ್ಯ ಶಾಸ್ತ್ರಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಹಿರೇಮಠ ರಟಗಲ್ಲ ಅವರು ಆಶೀರ್ವಚನ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶಂಭುಲಿಂಗಯ್ಯ ಶಾಸ್ತ್ರಿಗಳು, ಹಣ-ಆಸ್ತಿ ಸೇರಿದಂತೆ ಲೌಕಿಕ ಸಂಪತ್ತು ಕ್ಷಣಿಕವಾಗಿದ್ದು, ಜೀವನದಲ್ಲಿ ಶಾಶ್ವತವಾಗಿ ಉಳಿಯುವುದು ಭಕ್ತಿ ಮತ್ತು ಜ್ಞಾನ ಮಾತ್ರ ಎಂದು ಹೇಳಿದರು. ಗಣೇಶೋತ್ಸವದ ಅಂಗವಾಗಿ ಯುವಕ ಮಂಡಳಿ ಆಯೋಜಿಸಿರುವ ಐದು ದಿನಗಳ ಜ್ಞಾನಯಜ್ಞ ಶ್ಲಾಘನೀಯವಾಗಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.  

ಮನುಷ್ಯನ ಜೀವನದಲ್ಲಿ ಭಕ್ತಿ, ಸಂಸ್ಕಾರ ಹಾಗೂ ಆಧ್ಯಾತ್ಮದ ಮಹತ್ವವನ್ನು ಸರಳವಾಗಿ ವಿವರಿಸಿದ ಅವರು, ಧರ್ಮದ ಆಶಯದಂತೆ ಜೀವನ ನಡೆಸಬೇಕು. ಅಧರ್ಮವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಇಂತಹ ಕಾರ್ಯಕ್ರಮಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಯುವಕರು ಹಾಗೂ ಮಕ್ಕಳಲ್ಲಿ ಸಂಸ್ಕಾರ ಮತ್ತು ಭಕ್ತಿಭಾವ ಬೆಳೆಸುವಲ್ಲಿ ಸಹಕಾರಿಯಾಗುತ್ತವೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಹಿರಿಯರಾದ ಆರ್‌.ಎಂ. ಮಸಳಿ ಮಾತನಾಡಿ, ಶ್ರೀ ಸದಾಶಿವ ಯುವಕ ಮಂಡಳಿ ಹಮ್ಮಿಕೊಂಡಿರುವ ಆಧ್ಯಾತ್ಮಿಕ ಕಾರ್ಯಕ್ರಮ ಇತರ ಯುವಕ ಮಂಡಳಿಗಳಿಗೆ ಮಾದರಿಯಾಗಿದೆ ಎಂದರು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ಪೂರ್ವಜನ್ಮದ ಪುಣ್ಯವಾಗಿದ್ದು, ಇವು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತವೆ. ಕಾರ್ಯಕ್ರಮಕ್ಕೆ ಗ್ರಾಮಸ್ಥರು ನಿರಂತರ ಬೆಂಬಲ ನೀಡಬೇಕು ಎಂದು ಹೇಳಿದರು.  

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಷಗೌಡ ಪಾಟೀಲ, ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜಕುಮಾರ ಮಸಳಿ ಸೇರಿದಂತೆ ಹಲವರು ಮಾತನಾಡಿದರು.  ಕಾರ್ಯಕ್ರಮದಲ್ಲಿ ವೇದಮೂರ್ತಿ ಶರಣಯ್ಯ ಹಿರೇಮಠ ಗುರುಗಳು, ಆರ್‌.ಎಂ. ಮಸಳಿ, ಎಂ.ಜಿ. ಗುಣಕಿ, ಸಂತೋಷ ಮಸಳಿ, ಮಲ್ಲಿಕಾರ್ಜುನ ಮಸಳಿ, ಸುಭಾಷಗೌಡ ಪಾಟೀಲ, ಪ್ರೊ. ಎ.ಆರ್‌. ಮಸಳಿ, ಮಂಜುಗೌಡ ಬಿರಾದಾರ, ರಾಜೀವ ಮಸಳಿ, ವಿ.ಆರ್‌. ಅಕ್ಕಿ ಸೇರಿದಂತೆ ಸದಾಶಿವ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.  

ಸಿದ್ದಯ್ಯ ಪಡದಳ್ಳಿ ಮತ್ತು ಮಹಾಂತೇಶ ಮ. ಸುತಾರ ಸಂಗೀತ ಸೇವೆ ಸಲ್ಲಿಸಿದರು. ಪ್ರೊ. ಎ.ಆರ್‌. ಮಸಳಿ ಸ್ವಾಗತಿಸಿದರು. ಕಲ್ಮೇಶ ಕನಮಡಿ ಸನ್ಮಾನ ಸಮಾರಂಭ ನಡೆಸಿಕೊಟ್ಟರು. ಕಲ್ಲಪ್ಪ ನಂದರಗಿ ಕಾರ್ಯಕ್ರಮ ನಿರೂಪಿಸಿದರು. ಪೂಜಾ ನಾಗಠಾಣ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.